ನವದೆಹಲಿ: ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ದಮನ, ಮಹಿಳೆಯರ ಮೇಲಿನ ಕಠಿಣ ನಿರ್ಬಂಧಗಳು, ಸ್ವಾತಂತ್ರ್ಯ ಹರಣದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮಿತಿಗೊಳಿಸುವ ನಿರ್ಬಂಧಗಳನ್ನು ವಿಧಿಸಿದ್ದಕ್ಕಾಗಿ ತಾಲಿಬಾನ್ ವಿರುದ್ಧ ವಾಗ್ದಾಳಿ ನಡೆಸಿದೆ. ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಸಮುದಾಯದ ನೀತಿಗಳಿಗೆ ವಿರುದ್ಧವಾಗಿವೆ ಎಂದು ಆಫ್ಘನ್ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಆಫ್ಘನ್ನಲ್ಲಿ ಎಲ್ಲ ಮಹಿಳೆಯರು ಸಾರ್ವಜನಿಕ ಸ್ಥಳ ಮತ್ತು ಮಾಧ್ಯಮ ಪ್ರಸಾರಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು. ಅಗತ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಇದನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಕುರಿತು ತಾಲಿಬಾನ್ ಹೊರಡಿಸಿದ ಪ್ರಕಟಣೆಗಳ ಬಗ್ಗೆ ಭದ್ರತಾ ಮಂಡಳಿ ಸದಸ್ಯರು ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಮುಖ ರಾಷ್ಟ್ರೀಯ ಸಂಸ್ಥೆಗಳ ವಿಸರ್ಜನೆ, ಮಹಿಳೆಯರ ಹಕ್ಕುಗಳ ಹರಣ, ಕಠಿಣ ನಿರ್ಬಂಧಗಳನ್ನು ಶೀಘ್ರವೇ ತಾಲಿಬಾನ್ ಸರ್ಕಾರ ಹಿಂತೆಗೆದುಕೊಳ್ಳಬೇಕು. ಇದು ಮಾನವರ ಮೇಲೆ ನಡೆಸುವ ದೌರ್ಜನ್ಯವಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಇದಲ್ಲದೇ ಮಹಿಳಾ ಶಿಕ್ಷಣವನ್ನು ನಿರ್ಬಂಧಿಸಿದ್ದನ್ನೂ ವಿಳಂಬವಿಲ್ಲದೇ ಎಲ್ಲಾ ವಿದ್ಯಾರ್ಥಿನಿಯರಿಗಾಗಿ ಶಾಲೆಗಳನ್ನು ಪುನಃ ತೆರೆಯುವ ಬದ್ಧತೆಯನ್ನು ತಾಲಿಬಾನ್ ತೋರಬೇಕು ಎಂದು ಒತ್ತಾಯಿಸಿದ್ದಾರೆ.
ಓದಿ: ಒಂದೇ ಕಾಲಲ್ಲಿ ಕಿಲೋಮೀಟರ್ ನಡೆದು ಶಾಲೆಗೆ ಬರುವ ವಿದ್ಯಾರ್ಥಿನಿ.. ದಿವ್ಯಾಂಗ ಸೀಮಾ ಎಲ್ಲರಿಗೂ ಸ್ಫೂರ್ತಿ..