ನವದೆಹಲಿ : ಹೈದರಾಬಾದ್- ನವದೆಹಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೋರ್ವರು ಟೇಕ್ ಆಫ್ ಸಂದರ್ಭದಲ್ಲಿ ತುರ್ತು ನಿರ್ಗಮನದ ಕವರ್ ತೆರೆದಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತುರ್ತು ನಿರ್ಗಮನದ ಕವರ್ ತೆರೆದ ವ್ಯಕ್ತಿಯನ್ನು ದೆಹಲಿಯ ಶಹ್ದಾರಾದ ದಿಲ್ಶಾದ್ ಗಾರ್ಡನ್ ನಿವಾಸಿ ಫುರುಕೋನ್ ಹುಸೇನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಈ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಫ್ಐಆರ್ ಮಾಹಿತಿ ಪ್ರಕಾರ, ಕಳೆದ ಜುಲೈ 8 ರಂದು ಇಂಡಿಗೋ ಫ್ಲೈಟ್ 6E-5605 ನಲ್ಲಿ ಈ ಘಟನೆ ನಡೆದಿದೆ. ವಿಮಾನ ಸಿಬ್ಬಂದಿ ಸಲೋನಿ ಸಿಂಗ್ ಹಾಗೂ ಪೈಲಟ್-ಇನ್-ಕಮಾಂಡ್ ಮಂಜಿತ್ ಸಿಂಗ್ ಅವರು ಈ ಬಗ್ಗೆ ದೂರು ನೀಡಿದ್ದಾರೆ. ದೂರಿನಲ್ಲಿ ಫುರುಕೋನ್ ಹುಸೇನ್ ಅವರು ಆಸನ ಸಂಖ್ಯೆ 18 ಎ (ತುರ್ತು ನಿರ್ಗಮನ) ನಲ್ಲಿ ಕುಳಿತಿದ್ದರು. ವಿಮಾನವು ಟೇಕ್ ಆಫ್ ಆಗುವ ಸಂದರ್ಭದಲ್ಲಿ 'ತುರ್ತು ನಿರ್ಗಮನ' ಕವರನ್ನು ಎಳೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ತಿಳಿದ ತಕ್ಷಣ ವಿಮಾನ ಸಿಬ್ಬಂದಿಯು ಇತರ ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಹುಸೇನ್ನನ್ನು ಮತ್ತೊಂದು ಆಸನಕ್ಕೆ ಸ್ಥಳಾಂತರಿಸಿದರು. ವಿಮಾನಯಾನದ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಐಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹುಸೇನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ನಿಯಮಗಳ 22ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗೆ ನಿಂದನೆ : ಕಳೆದ ಕೆಲವು ದಿನಗಳ ಹಿಂದೆ ಟೊರೊಂಟೊದಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯನ್ನು ನಿಂದಿಸಿದ್ದಕ್ಕೆ ಮತ್ತು ಶೌಚಾಲಯದ ಬಾಗಿಲು ಒಡೆದಿದ್ದಕ್ಕೆ ನೇಪಾಳದ ಪ್ರಜೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಏರ್ ಇಂಡಿಯಾ A-188 ವಿಮಾನದಲ್ಲಿ ಘಟನೆ ನಡೆದಿತ್ತು. ಆರೋಪಿಯನ್ನು ನೇಪಾಳ ಮೂಲದ ಮಹೇಶ್ ಸಿಂಗ್ ಪಂಡಿ ಎಂದು ಗುರುತಿಸಲಾಗಿತ್ತು.
ಈ ಸಂಬಂಧ ವಿಮಾನಯಾನ ಸಿಬ್ಬಂದಿ ಆದಿತ್ಯ ಕುಮಾರ್ ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ನೇಪಾಳದ ನಿವಾಸಿಯಾಗಿರುವ ಮಹೇಶ್ ಸಿಂಗ್ ಪಂಡಿ ಏರ್ ಇಂಡಿಯಾ ವಿಮಾನ A -188ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹೇಶ್ ಸಿಂಗ್ ಅವರು ತಾವು ಕುಳಿತಿದ್ದ ಆಸನ ಸಂಖ್ಯೆ 26E ನಿಂದ 26 Fನಲ್ಲಿ ಕುಳಿತುಕೊಂಡು, ಎಕಾನಮಿ ಕ್ಲಾಸ್ನಲ್ಲಿದ್ದ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದ್ದ.
ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದೆವು. ಅವರು ಬಂದು ಎಚ್ಚರಿಕೆ ನೀಡಿದರು. ಊಟದ ಬಳಿಕ ವಿಮಾನದ ಶೌಚಾಲಯದಲ್ಲಿ ಹೊಗೆ ಬರುತ್ತಿರುವ ಬಗ್ಗೆ ನಮಗೆ ಎಚ್ಚರಿಕೆ ಲಭಿಸಿತು. ಈ ಬಗ್ಗೆ ನೋಡಿದಾಗ ವ್ಯಕ್ತಿಯು ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಪ್ರಯಾಣಿಕ ವಶಕ್ಕೆ