ಕೊಚ್ಚಿ: ನಟಿ ಸನ್ನಿ ಲಿಯೋನ್ ಮತ್ತು ಅವರ ಗಂಡ ಡೇನಿಯಲ್ ವೆಬರ್ ಮತ್ತು ಅವರ ಉದ್ಯೋಗಿಯ ವಿರುದ್ಧ ವಂಚನೆ ಪ್ರಕರಣದ ಮೂಲಕ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸುವುದಾಗಿ ಕೇರಳ ಹೈಕೋರ್ಟ್ ತಿಳಿಸಿದೆ.
ಸನ್ನಿ ಲಿಯೋನ್ ಯಾವುದೇ ಕ್ರಿಮಿನಲ್ ಅಪರಾಧ ಮಾಡಿಲ್ಲ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಇದರಲ್ಲಿ ಕ್ರಿಮಿನಲ್ ಪ್ರಕರಣ ಏನು?, ನೀವು ಅನಗತ್ಯವಾಗಿ ಅವರಿಗೆ ಕಿರುಕುಳ ನೀಡುತ್ತಿದ್ದೀರಿ. ಹೀಗಾಗಿ ಕೇಸು ರದ್ದು ಮಾಡುತ್ತಿರುವುದಾಗಿ ಪೀಠ ಹೇಳಿ ವಿಚಾರಣೆಯನ್ನು ಮಾರ್ಚ್ 31ಕ್ಕೆ ಮುಂದೂಡಿದೆ.
ಸನ್ನಿ ಲಿಯೋನ್ ವಿರುದ್ಧ ಕೇರಳದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿ ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಆದರೆ, ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಈ ಮೂಲಕ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸನ್ನಿ ಲಿಯೋನ್ ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿದ್ದು, ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ತಾವು ಅಮಾಯಕರು ಎಂದು ಮನವಿ ಮಾಡಿದ್ದರು.
ಈ ಹಿಂದೆ ದೂರುದಾರರು ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಆದರೆ, ಸಾಕ್ಷಾಧಾರಗಳ ಕೊರತೆಯಿಂದ ಜುಲೈ 2022ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇದನ್ನು ವಜಾಗೊಳಿಸಿದೆ. ಹೀಗಾಗಿ ಪ್ರಕರಣವನ್ನು ವಜಾ ಮಾಡಬೇಕು ಎಂದು ಮನವಿ ಮಾಡಿ ಸನ್ನಿ ಲಿಯೋನ್ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು.
ಸನ್ನಿ ಲಿಯೋನ್ ಬಗ್ಗೆ..: ಅಮೆರಿಕದ ಮಾದಕ ಜಗತ್ತಿನ ತಾರೆಯಾಗಿ ಗುರುತಿಸಿಕೊಂಡಿದ್ದ ರೂಪದರ್ಶಿ ಸನ್ನಿ ಲಿಯೋನ್. ಅಲ್ಲಿನ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದು, ಹಿಂದಿ ಬಿಗ್ ಬಾಸ್ 5ನೇ ಸೀಸನ್ನಲ್ಲಿ ಕಾಣಿಸಿಕೊಂಡಿದ್ದರು. ಅನೇಕ ವಿವಾದಕ್ಕೂ ಗುರಿಯಾಗಿದ್ದರು. ಇದಾದ ಬಳಿಕ ಮಹೇಶ್ ಭಟ್ ಅವರ ಜಿಸ್ಮ್ 2 ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ದೇಶದ ಹಲವು ಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಿದ್ದರು. ಕೇರಳ ಸೇರಿದಂತೆ ದೇಶದೆಲ್ಲೆಡೆ ಅನೇಕ ಅಭಿಮಾನಿಗಳು ಇವರಿದ್ದಾರೆ. ಮಂಡ್ಯದಲ್ಲಿ ನಟಿ ಸನ್ನಿ ಲಿಯೋನ್ಗಾಗಿ ಅಭಿಮಾನಿ ಬಳಗವನ್ನೇ ಸ್ಥಾಪಿಸಿದ್ದಾರೆ. ಕೇರಳದಲ್ಲೂ ಕೂಡ ಇವರ ಅನೇಕ ಅಭಿಮಾನಿ ಸಂಘಗಳನ್ನು ಕಾಣಬಹುದು.
ಇದನ್ನೂ ಓದಿ: ಸ್ವರಾ ಫಹಾದ್ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ