ನವದೆಹಲಿ: ಮಣಿಪುರದಲ್ಲಿ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಬುಧವಾರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಹಿಂಸಾಚಾರವನ್ನು ತ್ಯಜಿಸಲು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದ್ದು, ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ಬುಧವಾರ ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಐತಿಹಾಸಿಕ ಮೈಲಿಗಲ್ಲು ಎಂದು ಶಾ ಬಣ್ಣಿಸಿದ್ದಾರೆ.
"ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪಾದ ಯುಎನ್‌ಎಲ್‌ಎಫ್ ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಮತ್ತು ಶಾಂತಿ, ಪ್ರಗತಿಯ ಹಾದಿಯಲ್ಲಿ ಸಾಗುವ ಅವರ ಪ್ರಯಾಣಕ್ಕೆ ಶುಭ ಹಾರೈಸುತ್ತೇನೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ’ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ’ : ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್
ಆರು ದಶಕಗಳ ಉಗ್ರವಾದ ಅಂತ್ಯ: "ಮಣಿಪುರ ಸರ್ಕಾರ ಮತ್ತು ಯುಎನ್‌ಎಲ್‌ಎಫ್‌ನೊಂದಿಗಿನ ಶಾಂತಿ ಒಪ್ಪಂದವು ಆರು ದಶಕಗಳ ಕಾಲದ ಸಶಸ್ತ್ರ ಚಳವಳಿಯ ಅಂತ್ಯವನ್ನು ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರನ್ನೊಳಗೊಂಡ ಅಭಿವೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮತ್ತು ಈಶಾನ್ಯ ಭಾರತದ ಯುವಕರಿಗೆ ಉತ್ತಮ ಭವಿಷ್ಯವನ್ನು ಒದಗಿಸುವಲ್ಲಿ ಇದು ಒಂದು ಹೆಗ್ಗುರುತಾದ ಸಾಧನೆಯಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 2024 ರಲ್ಲಿ ಮತ್ತೆ ಮೋದಿ ಪಿಎಂ, 2026 ರಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ: ಅಮಿತ್ ಶಾ