ಅನಂತಪುರ (ಆಂಧ್ರಪ್ರದೇಶ): ಚೌಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೋರ್ವ ದೇವಿಯ ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಉರವಕೊಂಡ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ದೇಗುಲದ ಹಿಂದಿನ ಗುಡ್ಡದಿಂದ ಒಳಗೆ ನುಗ್ಗಿರುವ ಕಳ್ಳ ಬೀಗ ಒಡೆದು ಕಳವು ಮಾಡಿದ್ದಾನೆ. ನಿರಾತಂಕವಾಗಿ ಒಳ ಹೋಗಿರುವ ಖದೀಮ ಗರ್ಭಗುಡಿಯಲ್ಲಿ ದೇವಿಯ ಅಲಂಕಾರಕ್ಕೆ ಬಳಸಲಾಗಿದ್ದ ಕಿರೀಟ, ಹಸ್ತ ಹಾಗೂ ಇತರೆ ವಸ್ತುಗಳು ಸೇರಿ 12.5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ದೇವಸ್ಥಾನದ ಅರ್ಚಕರು ಬಂದಾಗ ದೇವಿಯ ಆಭರಣಗಳು ಕಳುವಾಗಿರುವ ವಿಷಯ ಗೊತ್ತಾಗಿದೆ. ಅಂತೆಯೇ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ 7.5 ಲಕ್ಷ ರೂಪಾಯಿ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ.. ಬುಲೆಟ್ನಲ್ಲಿ ಬಂದ 'ಶಿವ-ಪಾರ್ವತಿ', ಶಿವ ಅರೆಸ್ಟ್