ಪುಣೆ: ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಬೀದಿ ಶ್ವಾನಕ್ಕೆ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಬ್ಯಾನರ್ ಕಟ್ಟಿ, ಅದರಲ್ಲಿ ತಮ್ಮ ನೆಚ್ಚಿನ ಶ್ವಾನ ಫೋಟೋ ಹಾಕಿ, ಬಳಿಕ ಶುಭಾಶಯ ತಿಳಿಸುವವರ ಫೋಟೋಗಳನ್ನು ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಖಂಡು ಎಂಬ ಬೀದಿ ನಾಯಿಗೆ ಜನ್ಮದಿನವನ್ನು ಆಚರಿಸಿದ್ದಾರೆ. ವಿವಿ ವಿದ್ಯಾರ್ಥಿಗಳು ಬೀದಿ ಶ್ವಾನವೊಂದನ್ನು ಸಾಕುತ್ತಿದ್ದಾರೆ. ಇದಕ್ಕೆ ಖಂಡು ಎಂದು ಹೆಸರಿಟ್ಟಿದ್ದು, ಇದು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೆಚ್ಚಿನ ಶ್ವಾನವಾಗಿದೆ.
ಖಂಡು ಜನ್ಮದಿನವನ್ನು ಮೇ 26 ರಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಖತ್ ಆಗಿಯೇ ಆಚರಿಸಿದ್ದಾರೆ. ಬ್ಯಾನರ್ ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಖಂಡು ಭಾಯ್ ಜನ್ಮದಿನವನ್ನು ಆಚರಿಸಿದ್ದಾರೆ. ಖಂಡು ಭಾಯ್ ಹುಟ್ಟುಹಬ್ಬದ ಕುರಿತು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಓದಿ: ಕೇದಾರನಾಥ ದೇವಸ್ಥಾನದೊಳಗೆ ಶ್ವಾನ ಕರೆದೊಯ್ದು ನಂದಿ ವಿಗ್ರಹಕ್ಕೆ ಕಾಲು ಸ್ಪರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್
ವಿಶೇಷ ಎಂದರೆ ಇನ್ಸ್ಟಾದಲ್ಲಿ ಖಂಡು ಹೆಸರಿನಲ್ಲಿ ವಿದ್ಯಾರ್ಥಿಗಳು ಖಾತೆಯೊಂದನ್ನು ತೆರೆದಿದ್ದಾರೆ. ಅಲ್ಲಿ ಖಂಡು ಭಾಯ್ನ ವಿವಿಧ ವಿಡಿಯೋಗಳನ್ನು ಇಲ್ಲಿ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋಗಳ ಜೊತೆ ಬೀದಿ ನಾಯಿಗಳನ್ನು ಪ್ರೀತಿಸಬೇಕು ಎಂಬ ಸಂದೇಶವನ್ನೂ ಸಹ ವಿದ್ಯಾರ್ಥಿಗಳು ಸಾರುತ್ತಿದ್ದಾರೆ. ಖಂಡು ಹುಟ್ಟುಹಬ್ಬದ ಸಂಭ್ರಮದಲ್ಲೇ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.