ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಹಾಘಟಬಂಧನ್ನ ಸಿಎಂ ಅಭ್ಯರ್ಥಿ ಯುವ ನಾಯಕ ತೇಜಸ್ವಿ ಯಾದವ್ ಅಭಿಮಾನಿಗಳು ಈಗಾಗಲೇ ವಿಜಯದ ಹುಮ್ಮಸ್ಸಿನಲ್ಲಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಹಾಘಟಬಂಧನ್ ಗೆಲ್ಲುವ ಸೂಚನೆ ದೊರೆತಿದ್ದು, ಅಭಿಮಾನಿಗಳು ತೇಜಸ್ವಿ ಯಾದವ್ ಮನೆ ಮುಂದೆ ಅವರ ಹಳೆಯ ಫೋಟೋಗಳು ಮತ್ತು ಮೀನುಗಳನ್ನು ಹಿಡಿದು ತಮ್ಮ ನಾಯಕನಿಗೆ ವಿಶಿಷ್ಟವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಗನಾಗಿರುವ ತೇಜಸ್ವಿ ಯಾದವ್, ಯುವ ರಾಜಕೀಯ ನಾಯಕನಾಗಿದ್ದಾರೆ. 2015- 17 ರ ಮಧ್ಯೆ ಬಿಹಾರದ ಉಪಮುಖ್ಯಮಂತ್ರಿಯಾಗಿ, ದೇಶದಲ್ಲಿ ಅತೀ ಸಣ್ಣ ವಯಸ್ಸಿಗೆ ಡಿಸಿಎಂ ಆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮೊದಲು ತೇಜಸ್ವಿ ಕ್ರಿಕೆಟ್ ಆಟಗಾರರಾಗಿದ್ದರು, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಜಾರ್ಖಂಡ್ ಕ್ರಿಕೆಟ್ ತಂಡಗಳ ಪರವಾಗಿ ಅವರು ಆಟವಾಡಿದ್ದಾರೆ.
ಸದ್ಯ, ಮತ ಎಣಿಕೆಯ ಆರಂಭದ ಸುತ್ತುಗಳಲ್ಲಿ ಎನ್ಡಿಎ ಒಕ್ಕೂಟ ಬಿಜೆಪಿ ಹಾಗೂ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ ಎಣಿಕೆ ಮುಗಿದ ಬಳಿಕವಷ್ಟೇ ಯಾರು ಬಿಹಾರದ ಗದ್ದುಗೆ ಏರಲಿದ್ದಾರೆ ಎಂಬುವುದು ತಿಳಿದು ಬರಲಿದೆ.