ತಿರುವನಂತಪುರಂ, ಕೇರಳ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇವರನಾಡು ಕೇರಳದಲ್ಲಿ ಎಲ್ಲಾ ಪಕ್ಷಗಳು ಗೆಲುವು ಸಾಧಿಸಲು ಹರಸಾಹಸ ನಡೆಸುತ್ತಿವೆ. ಈಗ ಎನ್ಡಿಎ ಮೈತ್ರಿಕೂಟ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ನೀಡಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರತಿ ಕುಟುಂಬಕ್ಕೆ ಕನಿಷ್ಠ ಒಂದು ಉದ್ಯೋಗ, ಬಿಪಿಎಲ್ ಕುಟುಂಬಗಳಿಗೆ ಆರು ಅಡುಗೆ ಗ್ಯಾಸ್ ಸಿಲಿಂಡರ್, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುವ ಭರವಸೆ ನೀಡಲಾಗಿದೆ.
ಮನೆಯಲ್ಲಿ ಓರ್ವ ವ್ಯಕ್ತಿ ಮಾತ್ರ ಸಂಪಾದನೆ ಮಾಡುತ್ತಿದ್ದು, ಆತ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ಆ ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಎನ್ಡಿಎ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಮೀನಿನ ಹೊಟ್ಟೆಯೊಳಗೆ ಸಿಕ್ಕಿತು ಪ್ಲಾಸ್ಟಿಕ್ ಬ್ಯಾಗ್!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಲ್ಲಿ ಭೂಹೀನರಿಗೆ ಭೂಮಿಯ ಹಕ್ಕು ನೀಡುವುದಾಗಿ ಮತ್ತು ಶಬರಿಮಲೆಯ ಸಂಪ್ರದಾಯವನ್ನು ರಕ್ಷಿಸುವ ಸಲುವಾಗಿ, ಲವ್ ಜಿಹಾದ್ ತಡೆಯುವ ಸಲುವಾಗಿ ಕಾನೂನುಗಳನ್ನು ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಕಾಶ್ ಜಾವ್ಡೇಕರ್, ಈ ಪ್ರಣಾಳಿಕೆ ರಾಜ್ಯದ ಅಭಿವೃದ್ಧಿಗೆ ಕಾರ್ಯಸೂಚಿಯಾಗಲಿದೆ ಎಂದಿದ್ದಾರೆ. ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಹಲವು ಬಾರಿ ರಾಜ್ಯ ಆಳಿದ್ದು, ಜನರು ಪರ್ಯಾಯ ಸರ್ಕಾರದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಕೇರಳಕ್ಕೆ ನೀಡಿದ ಯೋಜನೆಗಳನ್ನು, ಅನುದಾನವನ್ನು ಇಲ್ಲಿನ ರಾಜಕೀಯ ಪಕ್ಷಗಳು ತಡೆದಿವೆ ಎಂದು ಜಾವ್ಡೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಕೇರಳ ಬಿಜೆಪಿಯ ಹಲವು ನಾಯಕರು ಸೇರಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹಾಜರಿದ್ದದ್ದು ವಿಶೇಷವಾಗಿತ್ತು.