ಅಹಮದಾಬಾದ್(ಗುಜರಾತ್): ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಕಾಲ ತವರು ರಾಜ್ಯ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಭಗವಾನ್ ಜಗನ್ನಾಥ ರಥೋತ್ಸವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಅಹಮದಾಬಾದ್‌ನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸಿದ ಶಾ, ಜಗನ್ನಾಥನಿಗೆ ಮಂಗಳಾರತಿ ಬೆಳಗಿದ್ದಾರೆ. ಶಾ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ದೇವಾಲಯದ ಗಜರಾಜನಿಗೆ ಕೇಂದ್ರ ಸಚಿವರು ಕಬ್ಬನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದೇವಾಲಯದ ಬಾಗಿಲು ತೆರೆದ ಸಂದರ್ಭದಲ್ಲಿ ಮೊದಲು ಭೇಟಿ ನೀಡುವುದು ಈ ಗಜರಾಜ.
ಅಹಮದಾಬಾದ್‌ನ ಜಗನ್ನಾಥ ದೇವಸ್ಥಾನಕ್ಕೆ ಸುಮಾರು 443 ವರ್ಷಗಳ ಇತಿಹಾಸವಿದೆ. ಅಷ್ಟೇ ಅಲ್ಲದೆ ಇಲ್ಲಿನ ರಥೋತ್ಸವಕ್ಕೆ ಅಪಾರವಾದ ಪ್ರತೀತಿಯಿದೆ. ಜಗನ್ನಾಥ ದೇವರ ದರ್ಶನ ಪಡೆದು, ರಥವನ್ನು ಎಳೆದರೆ ಜಗನ್ನಾಥನು ಅಂತಹವರ ಬದುಕಿನ ಬಂಡಿಯನ್ನು ಉಜ್ವಲ ಮತ್ತು ಸಮೃದ್ಧ ಭವಿಷ್ಯದೆಡೆಗೆ ಒಯ್ಯುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.