ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶತಾಯ ಗತಾಯ ಕಮಲ ಪಕ್ಷವನ್ನು ಅರಳಿಸಲು ಪಣತೊಟ್ಟಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಇಂದಿನಿಂದ ಬಂಗಾಳದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ತಡರಾತ್ರಿ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾ ರನ್ನು ಪಕ್ಷದ ನಾಯಕರು ಸ್ವಾಗತಿಸಿದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಅಮಿತ್ ಶಾ ಪರ ಜೈಕಾರ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
2021ರ ಏಪ್ರಿಲ್-ಮೇ ನಲ್ಲಿ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬಿಜೆಪಿ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದು, ನಿರಂತರವಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ಜೊತೆ ಪ್ರಚಾರವನ್ನು ಚುರುಕುಗೊಳಿಸಿದ್ದು, ಪಕ್ಷದ ನಾಯಕರೊಂದಿಗೆ ಸತತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ಎರಡು ದಿನಗಳ ಪ್ರವಾಸದಲ್ಲಿ ಅಮಿತ್ ಶಾ, ಮಿಡ್ನಾಪುರ, ಬೋಲಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಸಿದ್ದೇಶ್ವರಿ ಮಹಮಾಯ ದೇವಾಲಯ, ಸ್ವಾಮಿ ವಿವೇಕಾನಂದರ ವಂಶಸ್ಥರ ಮನೆಗೂ ಆಗಮಿಸಲಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾಗೆ ಬಿಗಿ ಭದ್ರತೆ ಒದಿಸಲಾಗಿದೆ.