ನವದೆಹಲಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದ್ದು, ಸಮುದಾಯ ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯಕೀಯ ಸಲಕರಣೆ ಶೇಖರಣೆ ಮಾಡುವಂತೆ ತಿಳಿಸಿದೆ.
ಡೆಂಗ್ಯೂ, ಮಲೇರಿಯಾ, ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ಜ್ವರ ಕಾಣಿಸಿಕೊಳ್ಳುತ್ತಿರುವ ಕಾರಣ ಎಲ್ಲ ರೋಗಿಗಳನ್ನು ಪರೀಕ್ಷೆಗೊಳಪಡಿಸುವಂತೆ ಆರೋಗ್ಯ ಸಚಿವಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಎರಡು ರಾಜ್ಯಗಳಲ್ಲಿ ಕೇಂದ್ರ ತಂಡ ನಿಯೋಜನೆಗೊಂಡಿದ್ದು, ಈ ತಂಡ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಕೆ ಮಾಡಿದ ಬಳಿಕ ಈ ಸೂಚನೆ ನೀಡಿದೆ. ಸಾರ್ವಜನಿಕರು ಅಪಾಯಕ್ಕೆ ತಲುಪುವ ಮುಂಚಿತವಾಗಿ ಪರೀಕ್ಷೆಗೊಳಪಡಿಸುವಂತೆ ಅದು ತಿಳಿಸಿದೆ. ಈ ನಿಟ್ಟಿನಲ್ಲಿ ಎಲ್ಲ ರೋಗಿಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದ್ದು, ಸಂಪರ್ಕ ಪತ್ತೆ ಹಚ್ಚುವಿಕೆ, ಪ್ರಯೋಗಾಲಯ, ಆಸ್ಪತ್ರೆಗಳ ಮೂಲಸೌಕರ್ಯ ಏರಿಕೆ ಮಾಡುವಂತೆಯೂ ತಿಳಿಸಿದೆ.
ಉತ್ತರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಭೂಷಣ್ ಪತ್ರ ಬರೆದಿದ್ದು, ಜನರಲ್ಲಿ ಏಕಾಏಕಿ ಜ್ವರ ಕಾಣಿಸಿಕೊಳ್ಳುತ್ತಿರುವ ಕಾರಣ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡು-ಹೆಣ್ಣು ಮಕ್ಕಳ ನಡುವೆ 'ಕರ್ಟನ್'..: ತಾಲಿಬಾನ್ ಕಠಿಣ ನಿಯಮಾನುಸಾರ ಶಾಲಾ-ಕಾಲೇಜುಗಳು ಆರಂಭ
ಕೇರಳದಲ್ಲಿ ಇಂದು ಕೂಡ 19,688 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 135 ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇಂದು ದಾಖಲೆಯ 1.8 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ.