ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವಾರದ ಆರಂಭದಲ್ಲಿ ಘೋಷಿಸಿದ 6.29 ಲಕ್ಷ ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು.
ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಕ್ಯಾಬಿನೆಟ್ ನಿರ್ಧಾರಗಳ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು. ಕೋವಿಡ್ -19 ಪೀಡಿತ ಕ್ಷೇತ್ರಗಳಿಗೆ ನೀಡುವ ಪರಿಹಾರ ಪ್ಯಾಕೇಜ್‌ಗೆ ಸಂಪುಟವು ಅನುಮೋದನೆ ನೀಡಿದೆ ಎಂದು ಹೇಳಿದರು.
ಕೋವಿಡ್ -19 ಎರಡನೇ ಅಲೆಯಿಂದ ಜರ್ಜರಿತಗೊಂಡ ಆರ್ಥಿಕತೆ ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿರುವ ಕೇಂದ್ರ ಪ್ರವಾಸೋದ್ಯಮ, ಕೃಷಿ, ವಿದ್ಯುತ್ ವಿತರಣೆ ಮತ್ತು ರಫ್ತು ಮುಂತಾದ ಕ್ಷೇತ್ರಗಳಿಗೆ ಪರಿಹಾರ ಪ್ಯಾಕೇಜ್ ಅನ್ನು ನೀಡುವುದಾಗಿ ಸೋಮವಾರದಂದು ಘೋಷಿಸಿದ್ದರು.
ಕೊರೊನಾ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಮಕ್ಕಳ ಹಾಸಿಗೆ ಮತ್ತು ಸೌಲಭ್ಯಗಳನ್ನು ಸ್ಥಾಪಿಸಲು 23,220 ಕೋಟಿ ರೂ. ನೀಡುವುದಾಗಿ ಕೇಂದ್ರ ವಿತ್ತ ಸಚಿವಾಲಯ ತಿಳಿಸಿತ್ತು.