ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ 2022-23ನೇ ಸಾಲಿನ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇವುಗಳ ಪೈಕಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಂಡವಾಳ ಹೂಡಿಕೆಗಾಗಿ ಹಣಕಾಸು ನೆರವು ಘೋಷಿಸಿದ್ದಾರೆ.
ರಾಜ್ಯಗಳು ಆರ್ಥಿಕವಾಗಿ ಸಬಲೀಕರಣ ಸಾಧಿಸಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದ್ದು, ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ 1 ಲಕ್ಷ ಕೋಟಿ ರೂ.ಗಳ ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಲಾಗಿದೆ. 50 ವರ್ಷಗಳವರೆಗೆ ಒಂದು ಲಕ್ಷ ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ತಿಳಿಸಿದರು. ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ ಜೊತೆಗೆ ಇತರೆ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಇದನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.
ರಾಜ್ಯಗಳ ಆರ್ಥಿಕತೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಳೆದ ಬಜೆಟ್ನಲ್ಲಿ ಈ ಯೋಜನೆಗಾಗಿ 15,000 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ, ಇದೀಗ ಇದರಲ್ಲಿ ದೊಡ್ಡ ಮಟ್ಟದ ಏರಿಕೆ ಮಾಡಿದ್ದು, ರಾಜ್ಯಗಳ ಆರ್ಥಿಕ ಬಲವರ್ಧನೆಗೋಸ್ಕರ ಹಣಕಾಸಿನ ನೆರವು ಘೋಷಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ