ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 370 ಕಾಯ್ದೆ ರದ್ಧತಿ ಸಮಯದಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಜಮ್ಮು- ಕಾಶ್ಮೀರದಲ್ಲಿ ಅತಿ ಹೆಚ್ಚು ನಿರುದ್ಯೋಗವಿದೆ ಎಂದು ತಿಳಿದು ಬಂದಿದೆ.
CMIE ನಡೆಸಿದ 30 ದಿನಗಳ ಸಮೀಕ್ಷೆಯಲ್ಲಿ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರವು ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ನಿರುದ್ಯೋಗ ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರವು ಶೇಕಡಾ 21.6 ರಷ್ಟು ನಿರುದ್ಯೋಗ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣ ಮತ್ತು ರಾಜಸ್ಥಾನವು ನಂತರದ ಸ್ಥಾನದಲ್ಲಿವೆ.
2021 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ದರವು ಶೇ. 21.9 ರಷ್ಟಿದ್ದರೆ, ಫೆಬ್ರವರಿಯಲ್ಲಿ ಶೇಕಡಾ 14.2 ಕ್ಕೆ, ಏಪ್ರಿಲ್‌ನಲ್ಲಿ ಶೇಕಡಾ 11.4 ಕ್ಕೆ, ಮೇ ತಿಂಗಳಲ್ಲಿ ಶೇ 12.1 ಕ್ಕೆ ಮತ್ತು ಜೂನ್ ತಿಂಗಳಲ್ಲಿ ಶೇ 10.6 ಕ್ಕೆ ಕಡಿಮೆಯಾಗಿದೆ ಎಂದು ಸಮೀಕ್ಷೆ ತೋರಿಸುತ್ತದೆ.
CMIE ವರದಿಯ ವಿಶ್ಲೇಷಣೆಯು ನಿರುದ್ಯೋಗ ದರವು ಜನವರಿಯಿಂದ ಜೂನ್ವರೆಗೆ ಸುಧಾರಿಸಿದೆ. ಸೆಪ್ಟೆಂಬರ್‌ನಲ್ಲಿ ರಾಜ್ಯದ ನಿರುದ್ಯೋಗ ದರ ಏಕಾಏಕಿ ಏರಿಕೆಯಾಗಿದೆ. CMIE ಹೊರತಾಗಿ, ಉದ್ಯೋಗ ನಿರ್ದೇಶನಾಲಯದ 2020 ರ ಅಂಕಿ- ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್‌ಡಿ ಪಡೆದಿರುವವರು ಉದ್ಯೋಗವನ್ನು ಹುಡುಕುವ ಮೂಲಕ ಮೂರು ಲಕ್ಷ ನೋಂದಣಿಗಳನ್ನು ಮಾಡಿದ್ದಾರೆ.