ನವದೆಹಲಿ: ಪ್ಯಾರಿಸ್ ಮೂಲದ ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಪ್ಸೋಸ್ (Ipsos) 'ಜಗತ್ತಿನ ಚಿಂತೆಗಳೇನು?' ಎಂಬ ಬಗ್ಗೆ ಸಮೀಕ್ಷೆಯೊಂದನ್ನು ಮಾಡಿದೆ. ತಿಂಗಳಿಗೊಮ್ಮೆ ನಡೆಯುವ ಈ ಸಮೀಕ್ಷೆಯಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ.
ಭಾರತದಲ್ಲಿನ ನಗರ ಪ್ರದೇಶದ ಜನರ ಮೇಲೆ ಇಪ್ಸೋಸ್ ನಡೆಸಿದ ಸಮೀಕ್ಷೆ ವರದಿ ಬಿಡುಗಡೆಯಾಗಿದೆ. ನಿರುದ್ಯೋಗದ ಬಗ್ಗೆ ಶೇಕಡಾ 42ರಷ್ಟು, ಕೊರೊನಾ ವೈರಸ್ ಬಗ್ಗೆ ಶೇಕಡಾ 42ರಷ್ಟು ಮಂದಿ ನಗರ ಪ್ರದೇಶಗಳಲ್ಲಿರುವ ಭಾರತೀಯರು ಯೋಚನೆ ಮಾಡುತ್ತಾರೆ ಎಂದು ವರದಿ ಮಾಡಿದೆ.
ಇದರ ಜೊತೆಗೆ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರದ ಬಗ್ಗೆ ಶೇಕಡಾ 28ರಷ್ಟು, ಅಪರಾಧ ಮತ್ತು ಹಿಂಸಾಚಾರದ ಬಗ್ಗೆ ಶೇಕಡಾ 25ರಷ್ಟು, ಬಡತನ ಮತ್ತು ಸಾಮಾಜಿಕ ಅಸಮಾನತೆ ಬಗ್ಗೆ ಶೇಕಡಾ 24ರಷ್ಟು ಹಾಗೂ ಶಿಕ್ಷಣದ ಬಗ್ಗೆ ಶೇಕಡಾ 21ರಷ್ಟು ಮಂದಿ ಚಿಂತಿಸುತ್ತಾರೆ ಎಂದು ಇಪ್ಸೋಸ್ ಹೇಳಿದೆ.
ಅತ್ಯಂತ ವಿಶೇಷವಾಗಿ ಕೊರೊನಾ ವೈರಸ್ ಬಗ್ಗೆ ಚಿಂತಿಸುವವರ ಪ್ರಮಾಣ ಹಿಂದಿನ ತಿಂಗಳಿಗಿಂತ ಶೇಕಡಾ 5ರಷ್ಟು ಕಡಿಮೆಯಾಗಿದೆ. ನಿರುದ್ಯೋಗದ ಬಗ್ಗೆ ಚಿಂತಿಸುವವರ ಪ್ರಮಾಣ ಹಿಂದಿನ ತಿಂಗಳಿಗಿಂತ ಶೇಕಡಾ 2ರಷ್ಟು ಏರಿಕೆಯಾಗಿದೆ.
ಜಗತ್ತಿನಲ್ಲಿ ಜನ ಯೋಚಿಸೋದು ಏಕೆ?
ಜಗತ್ತಿನ ಜನರೂ ಯಾವುದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ಎಂಬ ಬಗ್ಗೆ ಇಪ್ಸೋಸ್ ಹೇಳಿದೆ. ಕೊರೊನಾ ವೈರಸ್ ಬಗ್ಗೆ ಶೇಕಡಾ 36ರಷ್ಟು, ನಿರುದ್ಯೋಗದ ಬಗ್ಗೆ ಶೇಕಡಾ 31ರಷ್ಟು, ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರದ ಬಗ್ಗೆ ಶೇಕಡಾ 27ರಷ್ಟು, ಅಪರಾಧ ಮತ್ತು ಹಿಂಸಾಚಾರದ ಬಗ್ಗೆ ಶೇಕಡಾ 26ರಷ್ಟು, ಬಡತನ ಮತ್ತು ಸಾಮಾಜಿಕ ಅಸಮಾನತೆ ಬಗ್ಗೆ ಶೇಕಡಾ 31ರಷ್ಟು ಮಂದಿ ಚಿಂತಿಸುತ್ತಾರೆ ಎಂದು ಇಪ್ಸೋಸ್ ಹೇಳಿದೆ.
ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ
ಭರವಸೆಯ ರಾಷ್ಟ್ರಗಳ ಬಗ್ಗೆಯೂ ಕೂಡಾ ಇಪ್ಸೋಸ್ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಶೇಕಡಾ 65ರಷ್ಟು ಮಂದಿ ಭಾರತ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ನಂಬಿದ್ದಾರೆ. ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂಬ ನಂಬಿಕೆ ಹೆಚ್ಚು ಇಟ್ಟಿರುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ ಇದ್ದು, ಅಲ್ಲಿನ ಶೇಕಡಾ 90ರಷ್ಟು ಮಂದಿ ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ನಂಬಿದ್ದಾರೆ.
ಶೇಕಡಾ 65ರಷ್ಟು ಮಂದಿ ಜನರು ತಮ್ಮ ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ನಂಬಿದ್ದು, ಕೊಲಂಬಿಯಾದ ಶೇಕಡಾ 89ರಷ್ಟು ಮಂದಿಗೆ ತಮ್ಮ ದೇಶ ಸರಿಯಾಗಿ ಸಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ದಕ್ಷಿಣ ಆಫ್ರಿಕಾ ರಾಷ್ಟ್ರ ಶೇಕಡಾ 85ರಷ್ಟು ಮಂದಿ, ಪೆರು ದೇಶದಲ್ಲಿ ಶೇಕಡಾ 81ರಷ್ಟು ಮಂದಿ ತಮ್ಮ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ಬಗ್ಗೆ
ಇಪ್ಸೋಸ್ ಈ ಸಮೀಕ್ಷೆಯನ್ನು ಸುಮಾರು 28 ದೇಶಗಳಲ್ಲಿ ಕೈಗೊಂಡಿದೆ. ಸುಮಾರು 20,012 ಮಂದಿಯನ್ನು ಸಂದರ್ಶನ ಮಾಡಿ ಈ ಮಾಹಿತಿಯನ್ನು ಸಂಗ್ರಹ ಮಾಡಲಾಗಿದೆ. ಆಗಸ್ಟ್ 20ರಿಂದ ಸೆಪ್ಟೆಂಬರ್ 23ರವರೆಗೆ ನಡೆದ ಈ ಸಮೀಕ್ಷೆಯಲ್ಲಿ ವಿವಿಧ ವಯಸ್ಸಿನ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಮೆರಿಕ, ದಕ್ಷಿಣ ಆಫ್ರಿಕಾ, ಟರ್ಕಿ, ಇಸ್ರೇಲ್ ಮತ್ತು ಕೆನಡಾದಲ್ಲಿ 18ರಿಂದ 74 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಉಳಿದ ದೇಶಗಳಲ್ಲಿ 16 ರಿಂದ 74 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಸಂದರ್ಶನ ನಡೆಸಲಾಗಿದೆ.