ಪ್ರಯಾಗರಾಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಡೆದ ವಕೀಲ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ, ಶೂಟರ್ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಎನ್‌ಕೌಂಟರ್ ಬಗ್ಗೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇದು ಎನ್‌ಕೌಂಟರ್ ಅಲ್ಲ, ಬದಲಿಗೆ ನನ್ನ ಗಂಡನ ಮೇಲೆ ಪೊಲೀಸರು ಮತ್ತು ರಾಜ್ಯ ಸರ್ಕಾರ ಸೇಡು ತೀರಿಸಿಕೊಂಡಿದೆ ಎಂದು ವಿಜಯ್ ಚೌಧರಿ ಪತ್ನಿ ಸುಹಾನಿ ಆರೋಪಿಸಿದ್ದಾರೆ.
ಉಮೇಶ್ ಪಾಲ್, 2005ರಲ್ಲಿ ನಡೆದ ಬಿಎಸ್ಪಿ ಮಾಜಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ. ಫೆ.24ರಂದು ಉಮೇಶ್ ಪಾಲ್ನನ್ನು ಕೊಲೆ ಮಾಡಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದ ಶಂಕೆ ಮೇರೆಗೆ ಮಾರ್ಚ್ 6ರಂದು ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ಪತ್ನಿ ಸುಹಾನಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಪತಿಗೂ, ಪೊಲೀಸರಿಗೂ ಏನು ವ್ಯತ್ಯಾಸ?: ವಿಜಯ್ ಚೌಧರಿ ಎನ್‌ಕೌಂಟರ್ ಕುರಿತು ಸರ್ಕಾರ ಮತ್ತು ಪೊಲೀಸರನ್ನು ಸುಹಾನಿ ಪ್ರಶ್ನೆ ಮಾಡಿದ್ದಾರೆ. ತನ್ನ ಪತಿ ಶೂಟರ್ ಆಗಿ ಮಾಡಿರುವ ಕೊಲೆ ತಪ್ಪು ಎಂಬುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಆತನನ್ನು ಎನ್‌ಕೌಂಟರ್ ಮಾಡಿ ಕೊಲೆ ಮಾಡಬಾರದಿತ್ತು. ಬಂಧಿಸಿ ಕಾನೂನಿನ ಮೂಲಕ ಶಿಕ್ಷಿಸಬೇಕಿತ್ತು ಎಂದು ಸುಹಾನಿ ಕಣ್ಣೀರು ಹಾಕಿದರು.
ತನ್ನ ಪತಿಯನ್ನು ಎನ್‌ಕೌಂಟರ್‌ನಲ್ಲಿ ಕೊಂದಿರುವುದು ತಪ್ಪು. ಕಾನೂನು ಏನೇ ಶಿಕ್ಷೆ ನೀಡಿದರೂ ನಾನು ಸ್ವೀಕಾರ ಮಾಡುತ್ತಿದ್ದೆ. ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಅಥವಾ ನ್ಯಾಯಾಲಯ ನೀಡುವ ಯಾವುದೇ ಶಿಕ್ಷೆಯನ್ನು ನಾನು ಒಪ್ಪಿಕೊಳ್ಳುತ್ತಿದ್ದೆ. ನ್ಯಾಯಾಲಯದ ಮೂಲಕ ಪತಿಗೆ ಗಲ್ಲಿಗೇರಿಸಿದ್ದರೂ ನನಗೆ ಅಷ್ಟೊಂದು ದುಃಖವಾಗುತ್ತಿರಲಿಲ್ಲ. ಆದರೆ, ಎನ್‌ಕೌಂಟರ್ ನಡೆಸಿದ ರೀತಿಯಿಂದ ಪೊಲೀಸರಿಗೂ, ಪತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಪತಿ ಕೊಂದ ಪೊಲೀಸರು ಮತ್ತು ಸರ್ಕಾರ ಸೇಡು ತೀರಿಸಿಕೊಂಡಿದೆ ಎಂದು ಪತ್ನಿ ಆಕ್ರೋಶ ಹೊರ ಹಾಕಿದ್ದಾರೆ.
ಅತೀಕ್ ಅಹ್ಮದ್ ನಂಟು ಗೊತ್ತಿಲ್ಲ: ಇದೇ ವೇಳೆ ಉಮೇಶ್ ಪಾಲ್ ಕೊಲೆಯಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶೂಟರ್ ನನ್ನ ಪತಿ ವಿಜಯ್ ಚೌಧರಿ ಎಂದು ಸುಹಾನಿ ಒಪ್ಪಿಕೊಂಡಿದ್ದಾರೆ. ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಜೊತೆಗಿನ ವಿಜಯ್ ಚೌಧರಿ ನಂಟಿನ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಮೂಲಕ ಉಸ್ಮಾನ್ ಎಂಬ ಹೆಸರಿನಲ್ಲಿ ವಿಜಯ್ ಚೌಧರಿ ಗುಜರಾತ್ ಮತ್ತು ಬರೇಲಿ ಜೈಲಿಗೆ ಹೋಗಿ ಅತೀಕ್ ಅಹ್ಮದ್, ಅಶ್ರಫ್ನನ್ನು ಭೇಟಿಯಾಗಿದ್ದ ಎಂಬ ಪೊಲೀಸರ ಹೇಳಿಕೆಯನ್ನೂ ಪತ್ನಿ ತಳ್ಳಿ ಹಾಕಿದ್ದಾರೆ. ಜೊತೆಗೆ ಪತಿಯ ಹೆಸರು ಉಸ್ಮಾನ್ ಹೇಗೆ ಬದಲಾಯಿತು ಎಂಬುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮಗ ವಿಜಯ್ ಚೌಧರಿ ಸಾವಿನ ಬಗ್ಗೆ ತಂದೆ ವೀರೇಂದ್ರ ಚೌಧರಿ ಮತ್ತು ತಾಯಿ ಅಮರಾವತಿ ಕಣ್ಣೀರು ಹಾಕಿದ್ದಾರೆ. ಮಗನ ಸಾವಿನಿಂದ ದುಃಖವಾಗಿದೆ. ನಾವು ಬಡವರು ಮತ್ತು ದುರ್ಬಲರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ವೀರೇಂದ್ರ ಚೌಧರಿ ತಿಳಿಸಿದ್ದಾರೆ. ಮತ್ತೊಂದೆಡೆ, ತಮ್ಮ ಜೀವ ರಕ್ಷಣೆಗಾಗಿ ಕುಟುಂಬಸ್ಥರು ಭದ್ರತೆ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ವಿಜಯ್ ಚೌಧರಿ ಮನೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಪ್ರಕರಣ: ಶೂಟರ್ ವಿಜಯ್ ಚೌಧರಿ ಎನ್‌ಕೌಂಟರ್..!