ರುದ್ರಾಪುರ (ಉತ್ತರಾಖಂಡ): ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಭಾರತದ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಭಾರತವು ಶೇ.70ರಷ್ಟು ಸೂರ್ಯಕಾಂತಿ ಅಡುಗೆ ಎಣ್ಣೆ ಮತ್ತು 235 ಮಿಲಿಯನ್ ಡಾಲರ್ ಮೌಲ್ಯದ ರಸಗೊಬ್ಬರವನ್ನು ಉಕ್ರೇನ್‌ನಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದೇ ಯುದ್ಧ ಮುಂದುವರಿದರೆ ಭಾರತವು ಬೆಲೆ ಏರಿಕೆ ಹೊರೆ ಹೊರಬೇಕಾಗುತ್ತದೆ ಎಂದು ಉತ್ತರಾಖಂಡದ ರುದ್ರಾಪುರ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎ.ಎಸ್.ನೈನ್ ಕಳವಳ ವ್ಯಕ್ತಪಡಿಸಿದ್ದಾರೆ.
ಡಾ.ನೈನ್ ಹೇಳುವ ಪ್ರಕಾರ, ಉಕ್ರೇನ್ನಿಂದ 2.5 ಮಿಲಿಯನ್ ಟನ್ನಷ್ಟು ಸೂರ್ಯಕಾಂತಿ ಅಡುಗೆ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂದರೆ, ಶೇ.70ರಷ್ಟು ಎಣ್ಣೆ ಉಕ್ರೇನ್‌ನಿಂದಲೇ ಭಾರತ ಪಡೆಯುತ್ತಿದೆ. ಅದೇ ರೀತಿಯಾಗಿ ಶೇ.20ರಷ್ಟು ಎಣ್ಣೆ ರಷ್ಯಾದಿಂದ ಆಮದಾಗುತ್ತದೆ.
ಅಲ್ಲದೇ, 235 ಮಿಲಿಯನ್ ಡಾಲರ್ ಮೌಲ್ಯದ ರಸಗೊಬ್ಬರ ಕೂಡ ಉಕ್ರೇನ್‌ನಿಂದಲೇ ಆಮದು ಆಗುತ್ತದೆ. ಇದರಲ್ಲಿ ಮುಖ್ಯವಾಗಿ ಪೊಟ್ಯಾಸಿಕ್ (ಯೂರಿಯಾ), ಎನ್ಪಿಕೆ ಸೇರಿದಂತೆ ಸಾವಯವ ಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ ಉಕ್ರೇನ್ನಲ್ಲಿ ಯುದ್ಧ ಪರಿಣಾಮ ಇವುಗಳ ಉತ್ಪಾದನೆ ಮತ್ತು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಆಮದು ಮೇಲೆಯೂ ಪರಿಣಾಮ ಬೀರಿದ್ದು, ದೇಶದಲ್ಲಿ ಇವುಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಇಡೀ ವಿಶ್ವಕ್ಕೆ ಪರಿಣಾಮ ಬೀರಲಿದೆ, ಭಾರತ-ರಷ್ಯಾ ಸಂಬಂಧವೂ ಇದಕ್ಕೆ ಹೊರತಲ್ಲ: ರಷ್ಯಾ
ಇತ್ತ, ಭಾರತದಿಂದ ರಷ್ಯಾ ಮತ್ತು ಉಕ್ರೇನ್‌ಗೆ ಟೀ ಪುಡಿ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಈ ಯುದ್ಧ ದೀರ್ಘಕಾಲಿಕವಾದಲ್ಲಿ ಪೂರೈಕೆಯ ಸರಪಳಿ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತದೆ. ರೈತರ ಬೇಡಿಕೆಯಷ್ಟು ರಸಗೊಬ್ಬರ ಪೂರೈಸಲು ಕಷ್ಟವಾಗುತ್ತದೆ. ಇದು ಬೆಲೆಗೆ ಏರಿಕೆಗೆ ಕಾರಣವಾಗಬಹುದು. ಜತೆಗೆ ದೇಶದ ಕೃಷಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.