ನವದೆಹಲಿ: ಕೋವಿಡ್ ಕಾರಣದಿಂದ ರದ್ದಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಭೇಟಿಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 21ರಂದು ಭಾರತಕ್ಕೆ ಭೇಟಿ ನೀಡಲಿರುವ ಅವರು ಮೊದಲಿಗೆ ಗುಜರಾತ್ ಅಹಮದಾಬಾದ್‌ಗೆ ಆಗಮಿಸಲಿದ್ದು, ನಂತರ ಪ್ರಧಾನಿ ಮೋದಿ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ. ಈ ವೇಳೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಪಾಲುದಾರಿಕೆ ಮತ್ತು ಭದ್ರತಾ ಸಹಕಾರ ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಲಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿಯೊಬ್ಬರು ಗುಜರಾತ್ಗೆ ಭೇಟಿ ನೀಡುತ್ತಿದ್ದಾರೆ. ಬ್ರಿಟನ್ನಲ್ಲಿರುವ ಭಾರತೀಯ ಮೂಲದವರಲ್ಲಿ ಅರ್ಧದಷ್ಟು ಮಂದಿ ಗುಜರಾತ್ನವರಾಗಿದ್ದಾರೆಂದು ಬ್ರಿಟನ್ ಪ್ರಧಾನಿಗಳ ಕಚೇರಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಘೋಷಿಸುವ ಹಾಗೂ ಯುನೈಟೆಡ್ ಕಿಂಗ್‌ಡಮ್ ಹಾಗೂ ಭಾರತದಲ್ಲಿನ ಪ್ರಮುಖ ಉದ್ಯಮಗಳಲ್ಲಿ ಪ್ರಮುಖ ಹೂಡಿಕೆಗಳನ್ನು ಬೋರಿಸ್ ಜಾನ್ಸನ್ ಪ್ರಕಟಿಸುವ ನಿರೀಕ್ಷೆಯಿದೆ.
'ನನ್ನ ಭಾರತ ಭೇಟಿಯು ಉಭಯ ರಾಷ್ಟ್ರಗಳ ಜನರಿಗೆ ಅತ್ಯಂತ ಮುಖ್ಯವಾಗಿರಲಿದೆ ಎಂದು ಭಾವಿಸುತ್ತೇನೆ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಿಂದ ಇಂಧನ ಭದ್ರತೆ ಮತ್ತು ರಕ್ಷಣೆಯವರೆಗೆ ನಾವು ಚರ್ಚೆ ನಡೆಸುತ್ತೇವೆ' ಎಂದು ಅವರು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಉಕ್ರೇನ್‌ನಲ್ಲಿನ ಗಂಭೀರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೇವೆ. ಉಕ್ರೇನ್ನ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಇಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.
ಯುಕೆ-ಭಾರತ ಸಂಬಂಧವು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಮುಂಬರುವ ದಿನಗಳಲ್ಲಿ ನಾವು ನಮ್ಮ ವ್ಯಾಪಾರ, ಭದ್ರತೆ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಉನ್ನತಗೊಳಿಸುತ್ತೇವೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದಿಂದಾಗಿ ಬೋರಿಸ್ ಜಾನ್ಸನ್ ಎರಡು ಬಾರಿ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಬೇಕಾಯಿತು. ಅವರು ಜನವರಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಹಾಜರಾಗಬೇಕಿತ್ತು ಮತ್ತು ಏಪ್ರಿಲ್ 2021ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಬೇಕಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅವರ ಪ್ರವಾಸ ರದ್ದಾಗಿತ್ತು.
ಇದನ್ನೂ ಓದಿ: 'ಆಫ್ಘನ್ನರ ತಾಳ್ಮೆ ಪರೀಕ್ಷಿಸಬೇಡಿ': ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ಕೊಟ್ಟ ತಾಲಿಬಾನ್