ಉಜ್ಜೈನಿ(ಮಧ್ಯಪ್ರದೇಶ): ಸಾಮಾನ್ಯವಾಗಿ ವರದಕ್ಷಿಣೆಯಾಗಿ ಹಣ, ಚಿನ್ನಾಭರಣ, ಆಸ್ತಿ, ವಾಹನ ಹೀಗೆ ದುಬಾರಿ ವಸ್ತುಗಳನ್ನ ಕೊಡೋದನ್ನ ನೋಡಿದ್ದೀವಿ, ಕೇಳಿದ್ದೀವಿ. ಆದರೆ, ಕೋವಿಡ್ ಅಬ್ಬರ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ಇಲ್ಲೊಂದು ಕಡೆ ವರದಕ್ಷಿಣೆಯಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನ ನೀಡಿದ್ದಾರೆ.
ಹೌದು, ನಗರದ ಸೇವಾಧಾಮ್ ಆಶ್ರಮದ ನಿರ್ದೇಶಕ ಸುಧೀರ್ ಭಾಯ್ ಗೋಯೆಲ್ ಕುಟುಂಬದ ಹಿರಿಯ ಮಗಳ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಆಮ್ಲಜನಕ ಸಾಂದ್ರೀಕರಣ ಯಂತ್ರಗಳನ್ನು ನೀಡಿದೆ. ಎರಡು ಯಂತ್ರಗಳಿಗೆ 1.40 ಲಕ್ಷ ವೆಚ್ಚ ತಗುಲಿದೆ. ಗೋಯೆಲ್ ಅವರ ಈ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರ ಮದುವೆಗಳಲ್ಲಿ ಏಳು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಂಕಿತ್ ಗ್ರಾಮ್ ಹಾಗೂ ಮೋನಿಕಾ ವಿವಾಹ ಕಾರ್ಯಕ್ರಮದಲ್ಲಿ ನವಜೋಡಿಯಿಂದ ಎಂಟು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲಾಗಿದೆ. ಯಾರಿಗಾದ್ರೂ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಅವಶ್ಯಕತೆಯಿದ್ದರೆ, ಅವುಗಳನ್ನು ಪೂರೈಸಬೇಕು ಎಂಬ ವಿಭಿನ್ನ ವಚನ ತೆಗೆದುಕೊಳ್ಳಲಾಗಿದೆ. ವಧು ಮೋನಿಕಾ, ಸೇವಾಧಾಮ್ ಆಶ್ರಮದಲ್ಲಿ ದಿವ್ಯಾಂಗರ ಸೇವೆ ಸಲ್ಲಿಸುತ್ತಿದ್ದಾರೆ.
ಮದುವೆಯ ಮತ್ತೊಂದು ವಿಶೇಷವೆಂದರೆ, ಕೋವಿಡ್ ನಿಯಮ ಅನುಸರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 20 ಜನರು ಮೆರವಣಿಗೆ ಮೂಲಕ ಸಾಗಿ ಗಿಡಗಳನ್ನು ನೆಟ್ಟರು. ಈ ಮೂಲಕ ನವದಂಪತಿಗೆ ಶುಭ ಹಾರೈಸಿದರು.
ಇದನ್ನೂ ಓದಿ:‘ವೆಜ್ ಮಟನ್’: ನಾನ್ವೆಜ್ ರುಚಿ ನೀಡುವ ಜಾರ್ಖಂಡ್ನ ವಿಶೇಷ ಅಣಬೆ