ಜಮ್ಮು ಮತ್ತು ಕಾಶ್ಮೀರ : ಉಧಂಪುರದ ಘೋರ್ಡಿ ಪ್ರದೇಶದ ದಯಾಧಾರ್ ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಭಾರತದ ವಾಯುಪಡೆಯ ವಿಮಾನವನ್ನು ಬಳಸಿಕೊಳ್ಳಲಾಗಿದೆ.
ಇಡೀ ಕಾಡಿಗೆ ಬೆಂಕಿ ವ್ಯಾಪಿಸಿದ ಹಿನ್ನೆಲೆ ಅಗ್ನಿಶಾಮಕ ಕಾರ್ಯಾಚರಣೆಗಾಗಿ ವಿಮಾನವನ್ನು ನಿಯೋಜಿಸಲಾಗಿತ್ತು. ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ ಎಂದು ಅರಣ್ಯ ಸಂರಕ್ಷಣಾ ಪಡೆ ತಿಳಿಸಿದೆ.
ಅರಣ್ಯ ಸಂರಕ್ಷಣಾ ಪಡೆ ಮತ್ತು ಪೊಲೀಸ್ ತಂಡಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಅಪಾರ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿದೆ.