ಮುಂಬೈ : ಕೊರೊನಾ ವೈರಸ್ನಿಂದ ಮುಚ್ಚಲ್ಪಟ್ಟಿರುವ ದೇವಾಲಯಗಳು ಹಾಗೂ ಇತರ ಪೂಜಾ ಸ್ಥಳಗಳನ್ನು ಶೀಘ್ರದಲ್ಲೇ ಮತ್ತೆ ತೆರೆಯಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 14ರಂದು ಬರುವ ದೀಪಾವಳಿಗೆ ಶುಭಾಶಯ ಕೋರಿರುವ ಠಾಕ್ರೆ ಕೊರೊನಾ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಬ್ಬವನ್ನು ಯಾವ ರೀತಿ ಆಚರಿಸಬೇಕೆಂಬುದರ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಈ ವೇಳೆ ಮಾಹಿತಿ ನೀಡಿದರು.
ಶಾಲಾ-ಕಾಲೇಜುಗಳ ಆರಂಭದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಉದ್ಧವ್ ಠಾಕ್ರೆ, ದೀಪಾವಳಿ ನಂತರ 9ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ಸರ್ಕಾರ ಸಜ್ಜಾಗಿದೆ ಎಂದು ಭರವಸೆ ನೀಡಿದ್ದಾರೆ.
ದೇವಾಲಯಗಳು, ಮಸೀದಿಗಳು ಅಥವಾ ಬೇರೆ ಯಾವುದೇ ಪೂಜಾ ಸ್ಥಳವಿದ್ದರೂ, ಆ ಸ್ಥಳದಲ್ಲಿ ಜನದಟ್ಟಣೆ ತಪ್ಪಿಸಬೇಕಿದೆ. ಹಿರಿಯ ನಾಗರಿಕರಿಗೆ ಕೋವಿಡ್ನಿಂದ ಅಪಾಯವಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಠಾಕ್ರೆ ಹೇಳಿದ್ದು, ಪೂಜಾ ಸ್ಥಳಗಳಿಗೆ ಭೇಟಿ ನೀಡುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ ಎಂಬ ಕೋವಿಡ್ ನಿಯಂತ್ರಣ ಮಾರ್ಗಸೂಚಿಯ ಸುಳಿವು ನೀಡಿದರು.
ತಜ್ಞರ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಠಾಕ್ರೆ, ಜನರು ನನ್ನನ್ನು ಟೀಕಿಸಿದರೆ ಅದನ್ನು ನಾನು ಎದುರಿಸಲು ಸಿದ್ಧನಿದ್ದೇನೆ. ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುತ್ತೇನೆ. ಕೋವಿಡ್ ಸೋಂಕಿತ ವ್ಯಕ್ತಿ ಮುಖವಾಡ ಧರಿಸದಿದ್ದರೆ ಆ ವ್ಯಕ್ತಿ 400 ಮಂದಿಗೆ ಕೋವಿಡ್ ಸೋಂಕು ತಗುಲಿಸಬಹುದು. ಆದ್ದರಿಂದ ಕಠಿಣ ಕ್ರಮ ಅಗತ್ಯ ಎಂದು ಈ ವೇಳೆ ಠಾಕ್ರೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.