ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನಿಂದ ಉದ್ಧವ್ ಠಾಕ್ರೆಯ ಶಿವಸೇನೆಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಈಗಾಗಲೇ ಏಕನಾಥ್ ಶಿಂದೆ ನೇತೃತ್ವದಲ್ಲಿ 40 ಶಾಸಕರು ಬಿಜೆಪಿ ಜೊತೆ ಕೈಜೋಡಿಸಿ ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಂಸದರು ಬಂಡಾಯದ ಎಚ್ಚರಿಕೆ ನೀಡಿದ್ದು, ಅದರ ಶಮನಕ್ಕೆ ಉದ್ಧವ್ ಠಾಕ್ರೆ ಮುಂದಾಗಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವ ಮೂಲಕ ಶಿವಸೇನೆ ಸಂಸದರ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆಸಲು ಮಾತೋಶ್ರೀಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಯ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ವೇಳೆ, ಮಹತ್ವದ ಮಾತುಕತೆ ನಡೆಯಲಿದ್ದು, ಮೆಲ್ನೋಟಕ್ಕೆ ಠಾಕ್ರೆ ಬಳಗ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣದಲ್ಲಿದ್ದಾರೆ. ಇವರಿಗೆ ಬೆಂಬಲ ನೀಡುವಂತೆ ಆಗ್ರಹಿಸಿ ಶಿವಸೇನೆಯ ರಾಹುಲ್ ಶೆವಾಲೆ ಈಗಾಗಲೇ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಶಿವಸೇನೆಯ ಕೆಲ ಸಂಸದರು ಉದ್ಧವ್ ಠಾಕ್ರೆ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 19 ಸಂಸದರ ಪೈಕಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಒಂದು ವೇಳೆ, ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ ಕೈಗೊಳ್ಳದಿದ್ದರೆ ಶಾಸಕರ ಬೆನ್ನಲ್ಲೇ ಸಂಸದರು ಬಂಡಾಯವೆದ್ದು, ಉದ್ಧವ್ ಠಾಕ್ರೆಗೆ ದೊಡ್ಡ ಆಘಾತ ನೀಡುವ ಸಾಧ್ಯತೆ ಇದೆ. ಹೀಗಾಗಿ, ಶಿವಸೇನೆಗೆ ಹಾನಿಯಾಗದಂತೆ ಉದ್ಧವ್ ಠಾಕ್ರೆ ನಿರ್ಧಾರ ಕೈಗೊಳ್ಳಬೇಕಾಗಿದೆ.
ಶಿವಸೇನೆಯಲ್ಲಿ ಉಳಿದ ಶಾಸಕರಿಗೆ ಠಾಕ್ರೆ ಭಾವುಕ ಪತ್ರ: ಏಕನಾಥ್ ಶಿಂದೆ ಜೊತೆ 40 ಶಿವಸೇನೆಯ ಶಾಸಕರು ಹೋಗಿದ್ದು, ಇದೀಗ ಉದ್ಧವ್ ಠಾಕ್ರೆ ಜೊತೆ ಉಳಿದುಕೊಂಡಿರುವ 15 ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಬಾಹಾಸಾಹೇಬ್ ಠಾಕ್ರೆ ಅವರ ಮಂತ್ರ ಪಠಿಸುತ್ತಾ ನೀವು ಶಿವಸೇನೆಗೆ ನಿಷ್ಠರಾಗಿದ್ದು,ತಾಯಿ ಜಗದಂಬಾ ನಿಮಗೆ ಆರೋಗ್ಯ, ಆಯಸ್ಸು ನೀಡಲೆಂದು ಪ್ರಾರ್ಥನೆ ಮಾಡುತ್ತೆನೆಂದು ಪತ್ರದಲ್ಲಿ ತಿಳಿಸಿದ್ದಾರೆ.