ಉದಯಪುರ (ರಾಜಸ್ಥಾನ): ಮೊಹಮ್ಮದ್ ಪೈಗಂಬರ್ ಬಗೆಗಿನ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡ ಕಾರಣಕ್ಕೆ ಇಬ್ಬರು ಮತಾಂಧರಿಂದ ಕೊಲೆಗೀಡಾದ ರಾಜಸ್ಥಾನದ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ನೆರವೇರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಉದಯಪುರದಲ್ಲಿ ಮಂಗಳವಾರ ಇಬ್ಬರು ಮತಾಂಧರು ಟೈಲರ್ ಆಗಿದ್ದ ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ ವಿಡಿಯೋವನ್ನು ವೈರಲ್ ಮಾಡಿದ್ದರು. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಅಶೋಕ ನಗರ ರುದ್ರಭೂಮಿಯವರೆಗೆ ಅಂತಿಮಯಾತ್ರೆ ನಡೆಸಲಾಯಿತು. ಅಂತ್ಯಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಅಲ್ಲದೇ, ಅಂತಿಮ ಯಾತ್ರೆಯಲ್ಲಿ ಬೈಕ್, ಕಾರುಗಳ ಮೂಲಕವೂ ಜನರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ಹಯ್ಯ ಲಾಲ್ ಅಮರ್ ರಹೇ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳನ್ನು ಕೂಗಿದರು. ಒಟ್ಟಾರೆ ಶಾಂತಿಯುತವಾಗಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಜರುಗಿತು.
ಮಂಗಳವಾರ ಕನ್ಹಯ್ಯ ಲಾಲ್ ಹತ್ಯೆ ನಂತರ ಇಡೀ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದಯಪುರ ಸೇರಿ ಎಲ್ಲ 33 ಜಿಲ್ಲೆಗಳಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಏಳು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಒಂದು ತಿಂಗಳ ಕಾಲ 144ರಡಿ ನಿಷೇಧಾಜ್ಞೆ ಕೂಡ ಹೇರಲಾಗಿದೆ.
ಇದನ್ನೂ ಓದಿ: ಉದಯಪುರ್ ಕೊಲೆ ಪ್ರಕರಣ; ರಾಜಸ್ಥಾನದಲ್ಲಿ ಪೊಲೀಸ್ ಕಟ್ಟೆಚ್ಚರ