ಹೈದರಾಬಾದ್: ಊಬರ್ ಕಾರಿನಲ್ಲಿ ಪ್ರಯಾಣಿಕರು ಸಂಚರಿಸುತ್ತಿರುವಾಗ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಆ ಸಂದರ್ಭದಲ್ಲಿ ಪೊಲೀಸರೊಂದಿಗೆ ನಿರಂತರವಾಗಿ ಕಾರಿನ ಲೊಕೇಶನ್ ಹಂಚಿಕೊಳ್ಳಲು ಸಾಧ್ಯವಾಗುವ ಹಾಗೆ ಊಬರ್ ಸಂಸ್ಥೆ ಮತ್ತು ತೆಲಂಗಾಣ ಪೊಲೀಸರ ಮಧ್ಯೆ ತಾಂತ್ರಿಕ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ತೆಲಂಗಾಣ ಡಿಜಿಪಿ ಕಚೇರಿಯು ಪತ್ರಿಕಾ ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿದೆ.
ಅತ್ಯಾಧುನಿಕ ತಂತ್ರಜ್ಞಾನದ ಈ ವ್ಯವಸ್ಥೆಯ ಮೂಲಕ ಚಾಲಕ ಅಥವಾ ಪ್ರಯಾಣಿಕರು, ಊಬರ್ ಆ್ಯಪ್ ಮೇಲೆ ಒಂದೇ ಒಂದು ಸ್ವೈಪ್ ಮಾಡಿ ತಮ್ಮ ಲೊಕೇಶನ್, ಹೆಸರು ಮತ್ತು ಕಾಂಟ್ಯಾಕ್ಟ್ ಡಿಟೇಲ್ಸ್ ಪೊಲೀಸರೊಂದಿಗೆ ಶೇರ್ ಮಾಡಬಹುದು. ತುರ್ತು ಸಂದರ್ಭಗಳಲ್ಲಿ ಈ ವ್ಯವಸ್ಥೆಯಿಂದ ಆಪತ್ತಿನಲ್ಲಿರುವ ಜನರ ಜೀವ ಕಾಪಾಡಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವ್ಯವಸ್ಥೆಯು ಇಂದಿನಿಂದಲೇ ಹೈದರಾಬಾದ್ನಲ್ಲಿ ಊಬರ್ ಆ್ಯಪ್ ಚಾಲಕರು ಮತ್ತು ಪ್ರಯಾಣಿಕರಿಗೆ ಲೈವ್ ಆಗಲಿದೆ. ಇದರಿಂದ ಸಿಗುವ ಮಾಹಿತಿ ಆಧರಿಸಿ ತುರ್ತು ಸಂದರ್ಭಗಳಲ್ಲಿ ತ್ವರಿತ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಲಿದೆ. ತೆಲಂಗಾಣ ಮಾತ್ರವಲ್ಲದೇ ಇತರ ರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೂ ಈ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಊಬರ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಎಲ್ಲ ಸಮಯದಲ್ಲೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಹೊಸ ವ್ಯವಸ್ಥೆಯಿಂದ ಪೊಲೀಸರಿಗೆ ರಿಯಲ್ ಟೈಮ್ನಲ್ಲಿ ಸ್ಥಳ ಮತ್ತು ಬಳಕೆದಾರರ ವಿವರಗಳಂಥ ನಿರ್ಣಾಯಕ ವಿವರಗಳು ಸಿಗಲಿವೆ. ಇದರಿಂದ ತ್ವರಿತವಾಗಿ ಕಾರ್ಯನಿರ್ವಹಿಸಲು ಮತ್ತು ಜೀವಗಳನ್ನು ಉಳಿಸಲು ಸಹಾಯವಾಗಲಿದೆ ಎಂದು ಡಿಜಿಪಿ ಎಂ. ಮಹೇಂದರ್ ರೆಡ್ಡಿ ಹೇಳಿದರು.
ಇದನ್ನು ಓದಿ:ಯುವಕನ ಐಡಿಯಾ: ಬಿತ್ತನೆ ಯಂತ್ರದ ಆವಿಷ್ಕಾರ.. ರೈತರಿಗೆ ವರದಾನ