ಲಕ್ನೋ (ಉತ್ತರ ಪ್ರದೇಶ): ಗೋರಖ್‌ಪುರ ಮತ್ತು ಗೊಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ಬಯಸಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ) ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಇಂಥದ್ದೊಂದು ವಿಶೇಷ ಮನವಿ ಸ್ವೀಕರಿಸಿರುವುದು ಇದೇ ಮೊದಲು. ಮಹಿಳಾ ಪೊಲೀಸರಾಗಿ ನೇಮಕಗೊಂಡ ನಂತರ ಈ ಇಬ್ಬರು ಕಾನ್ಸ್‌ಟೇಬಲ್‌ಗಳಿಗೆ ತಮ್ಮ ಲಿಂಗ ಬದಲಾಯಿಸಿಕೊಳ್ಳಲು ಹೇಗೆ ಅನುಮತಿ ನೀಡುವುದು ಎಂಬುದು ಪೊಲೀಸ್ ಅಧಿಕಾರಿಗಳ ಮುಂದಿರುವ ಪ್ರಶ್ನೆ.
ಯುಪಿ ಪೊಲೀಸ್ ಇಲಾಖೆಯ ಹೆಚ್ಚುವರಿ ಡೈರೆಕ್ಟರ್ ಜನರಲ್ (ಎಡಿಜಿ) ಶ್ರೇಣಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಬ್ಬರು ಕಾನ್‌ಸ್ಟೆಬಲ್‌ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದರು.
"ಲಿಂಗ ಪರಿವರ್ತಗೆ ಒಳಗಾಗಲು ಅನುಮತಿಸಲು ಹಲವು ಸಮಸ್ಯೆಗಳಿವೆ. ಇಬ್ಬರು ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ನಂತರ ಪುರುಷ ಕಾನ್‌ಸ್ಟೆಬಲ್‌ಗಳೆಂದು ಪರಿಗಣಿಸಿದರೆ ಅವರಿಗೆ ಅಗತ್ಯವಿರುವ ಇತರ ದೈಹಿಕ ಮಾನದಂಡಗಳನ್ನು ಹೊಂದಿಸುವುದು ಹೇಗೆ?. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಎತ್ತರ, ಓಡುವ ಸಾಮರ್ಥ್ಯ ಮತ್ತು ಭುಜ ಬಲದಂತಹ ವಿಭಿನ್ನ ದೈಹಿಕ ಮಾನದಂಡಗಳಿವೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪುರುಷ ಮತ್ತು ಮಹಿಳೆಯರ ನೇಮಕಾತಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಮಹಿಳಾ ಮಾನದಂಡಗಳ ಅಡಿಯಲ್ಲಿ ಉದ್ಯೋಗ ಪಡೆದ ನಂತರ ಲಿಂಗವನ್ನು ಬದಲಾಯಿಸುವ ಮಹಿಳಾ ಸಿಬ್ಬಂದಿಯು ಮಾನದಂಡಗಳನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ'' ಎಂದು ವಿವರಿಸಿದರು.
''ಈ ವರ್ಷದ ಜನವರಿಯಿಂದ ಈ ಪ್ರಕರಣ ನಡೆಯುತ್ತಿದೆ. ಲಿಂಗ ಬದಲಾವಣೆಗೆ ಅನುಮತಿ ಪಡೆಯಲು ವಿಫಲವಾದ ನಂತರ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳ ಪೈಕಿ ಒಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡಿಜಿಪಿ ಕಚೇರಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅದೇ ಉತ್ತರವನ್ನು ಸಲ್ಲಿಸಿದೆ'' ಎಂದು ಹೇಳಿದ್ದಾರೆ.
"ಮೆರಿಟ್ ಆಧಾರದಡಿ ಮಹಿಳಾ ಕಾನ್‌ಸ್ಟೆಬಲ್‌ಗಳ ಕೋರಿಕೆಯನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವು ಮತ್ತೊಮ್ಮೆ ಪೊಲೀಸ್ ಪ್ರಧಾನ ಕಚೇರಿಯನ್ನು ಕೇಳಿದೆ. ಭವಿಷ್ಯದಲ್ಲಿ ಮತ್ತೆ ಬರಬಹುದಾದ ಇಂತಹ ಪ್ರಕರಣಗಳಿಗೆ ಕೆಲವು ಮಾನದಂಡಗಳನ್ನು ಸಿದ್ಧಪಡಿಸುವಂತೆ ಸೂಚಿಸಿದೆ" ಎಂದು ಉತ್ತರ ಪ್ರದೇಶ ಪೊಲೀಸ್ ಪ್ರಧಾನ ಕಚೇರಿಯ ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಹಿಳಾ ಕಾನ್‌ಸ್ಟೆಬಲ್‌ಗಳ ವೈದ್ಯಕೀಯ ಪರೀಕ್ಷೆ: ಇಬ್ಬರೂ ಕಾನ್‌ಸ್ಟೆಬಲ್‌ಗಳ ವೈದ್ಯಕೀಯ ಪರೀಕ್ಷೆಯನ್ನು ವೈದ್ಯಕೀಯ ಮಂಡಳಿಯ ಮೂಲಕ ಮಾಡಬೇಕು. ನಂತರ ಅವರ ಅಭಿಪ್ರಾಯವನ್ನು ನೀಡುವಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ಪತ್ರ ಬರೆದಿದ್ದಾರೆ'' ಎಂದು ಹೇಳಿದ ಅವರು, ''ನಾವು ಅಂತಿಮ ತೀರ್ಮಾನಕ್ಕೆ ಬರುವ ಮೊದಲು ವೈದ್ಯಕೀಯ ಮತ್ತು ಕಾನೂನು ಅಭಿಪ್ರಾಯವನ್ನು ಹೊರತುಪಡಿಸಿ ಲಿಂಗ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರಿಂದ ಅಭಿಪ್ರಾಯ ಪಡೆಯುತ್ತಿದ್ದೇವೆ. ನ್ಯಾಯಾಲಯ ಈ ಪ್ರಕರಣವನ್ನು ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಕೈಗೆತ್ತಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: ಸುರೇಂದ್ರನಗರದಲ್ಲಿ 110 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ