ಪೂಂಚ್ ( ಜಮ್ಮು ಕಾಶ್ಮೀರ ) : ಜಿಲ್ಲೆಯ ದುರ್ಗನ್ ಪೋಶಾನಾದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮತ್ತು ಸೇನೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೆಪ್ಯೂಟಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಹಲವು ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾಕರನ್ನು ಹೊಡೆದುರುಳಿಸಲಾಗಿದೆ ಎಂದಿದ್ದಾರೆ.
ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆ :
ಮೂರು ಗಂಟೆಗಳ ಜಂಟಿ ಕಾರ್ಯಾಚರಣೆ ಅಂತಿಮ ಹಂತದಲ್ಲಿದ್ದಾಗ ಸಿಕ್ಕಿಬಿದ್ದ ಭಯೋತ್ಪಾದಕರಿಗೆ ಶರಣಾಗುವಂತೆ ತಿಳಿಸಲಾಯಿತು. ಈ ವೇಳೆ ಒಬ್ಬ ಶರಣಾಗಿದ್ದ, ಆತನನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡಿಕ್ಕಿ ಕೊಲ್ಲಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ''ಭಾರತದ ಗಡಿಗಳನ್ನು ರಕ್ಷಿಸಲು ಎಲ್ಲ ಪಡೆಗಳು ಸಕಲ ಸನ್ನದ್ಧ'': ರಾವತ್
ಬಂಧಿತರಿಂದ ಎರಡು ಎಕೆ 47 ಗನ್, ಆರು ಎಕೆ 47 ಮ್ಯಾಗಝಿನ್ಸ್, 300 ಎಕೆ 47 ಮದ್ದು ಗುಂಡುಗಳು, ಒಂದು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್), ಒಂದು ಸ್ಯಾಟ್‌ಫೋನ್, 12 ಗ್ರೆನೇಡ್, ಮೂರು ಮೊಬೈಲ್ ಫೋನ್ ಮತ್ತು 26 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕಮಾಂಡಿಂಗ್ ಅಧಿಕಾರಿ ಎಸ್.ಕೆ.ಶರ್ಮಾ ಮಾಹಿತಿ ನೀಡಿದ್ದಾರೆ.