ಕೊಯಮತ್ತೂರು: ಆನ್ಲೈನ್ ರಮ್ಮಿ ಆಟದ ಹುಚ್ಚಿನಿಂದಾಗಿ ಹಣ ಕಳೆದುಕೊಂಡು ತೊಂದರೆಗೀಡಾಗಿರುವ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಜಯಚಂದ್ರನ್(32) ಕೊಯಮತ್ತೂರು ಜಿಲ್ಲೆಯ ಮಚಂಬಲೈಯಂ ಮೂಲದವನಾಗಿದ್ದು, ಸಿಎನ್ಸಿ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ. ಕಳೆದ ಕೆಲ ತಿಂಗಳಿಂದ ಸಾಲದ ಸುಳಿಗೆ ಸಿಲುಕಿದ್ದ ಆತ ಆನ್ಲೈನ್ ರಮ್ಮಿ ಆಟದ ವ್ಯಸನಿಯಾಗಿದ್ದಾನೆ. ರಮ್ಮಿ ಆಡಲು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಇತ್ಯಾದಿ ಬಳಕೆ ಮಾಡಿ ಹೊರಗಿನಿಂದ ಹಣ ಎರವಲು ಪಡೆದುಕೊಂಡಿದ್ದಾನೆ. ಈ ವೇಳೆ ಸಂಪೂರ್ಣ ಹಣ ರಮ್ಮಿ ಆಡಿ ಕಳೆದುಕೊಂಡಿದ್ದು, ಅದರಿಂದ ತೊಂದರೆಗೊಳಗಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಂತಹ ಮತ್ತೊಂದು ಘಟನೆ ಕೊಯಮತ್ತೂರಿನ ತೋಂಡಮುತೂರು ಪ್ರದೇಶದಲ್ಲಿ ನಡೆದಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವ ಕಳೆದ ಆರು ತಿಂಗಳಿಂದ ಆನ್ಲೈನ್ ರಮ್ಮಿ ಆಟದ ವ್ಯಸನಿಯಾಗಿದ್ದ. ಈತನ ಪತ್ನಿ ಜಗಳ ಮಾಡಿ ಕಳೆದ 15 ದಿನಗಳ ಹಿಂದೆ ತಾಯಿ ಮನೆಗೆ ಹೋಗಿದ್ದಳು. ಈ ವೇಳೆ ಸ್ನೇಹಿತನಿಗೆ ನೀಡಬೇಕಾಗಿದ್ದ 50 ಸಾವಿರ ರೂ.ಗಳಲ್ಲಿ 20 ಸಾವಿರ ರೂ. ರಮ್ಮಿ ಆಡಿ ಕಳೆದುಕೊಂಡಿದ್ದಾನೆ. ಇದರಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಮ್ಮಿ ನಿಷೇಧ ವಿಚಾರಣೆ ನವೆಂಬರ್ 19ಕ್ಕೆ ಮುಂದೂಡಿಕೆ
ತಮಿಳುನಾಡಿನಲ್ಲಿ ಆನ್ಲೈನ್ ರಮ್ಮಿ ಗೇಮ್ ಬ್ಯಾನ್ ಮಾಡುವಂತೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಅದರ ವಿಚಾರಣೆ ನವೆಂಬರ್ 19ಕ್ಕೆ ಮುಂದೂಡಿಕೆಯಾಗಿದೆ. ಮದ್ರಾಸ್ ಹೈಕೋರ್ಟ್ನಲ್ಲಿ ಇದರ ವಿಚಾರಣೆ ನಡೆಸಲಾಗುತ್ತಿದ್ದು, ಎಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಖಾತೆಗೆ ಹೋಗುತ್ತಿದೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಹೀಗಾಗಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಜತೆಗೆ ಮುಂದಿನ 10 ದಿನಗಳಲ್ಲಿ ಆನ್ಲೈನ್ ಜೂಜಾಟ ನಿಷೇಧಿಸಲು ತಮಿಳುನಾಡು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಕೋರ್ಟ್ ತಿಳಿಸಿದೆ. ತೆಲಂಗಾಣದಲ್ಲಿ ಈಗಾಗಲೇ ಆನ್ಲೈನ್ ಜೂಜಾಟ ನಿಷೇಧ ಮಾಡಲಾಗಿದೆ.