ಅಮೃತಸರ (ಪಂಜಾಬ್): ಇತ್ತೀಚೆಗೆ ದೇಶದ ಹಲವೆಡೆ ಬೀದಿ ನಾಯಿಗಳ ಹಾವಳಿ ಬಗ್ಗೆ ನಿರಂತರವಾಗಿ ಸುದ್ದಿಗಳು ಆಗುತ್ತಿದೆ. ಮಕ್ಕಳು ಮೇಲೆ ದಾಳಿ ಮಾಡುವುದು ಹಾಗೂ ಕಚ್ಚಿ ಗಾಯಗೊಳಿಸಿ ಸಾಯಿಸಿದ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಪಂಜಾಬ್ನ ಅಮೃತಸರದಿಂದ ಎರಡು ಬೀದಿ ನಾಯಿಗಳು ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.!
ಹೌದು, ಅಮೃತಸರದ ಬೀದಿ - ಬೀದಿಗಳಲ್ಲಿ ಓಡಾಡುತ್ತಿದ್ದ ಎರಡು ಶ್ವಾನಗಳು ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಕೆನಡಾ ತಲುಪಲಿವೆ. ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೊಸೈಟಿ (Animal Welfare and Care Society - AWCS) ಮೂಲಕ ಈ ಶ್ವಾನಗಳನ್ನು ಕೆನಾಡದ ಮಹಿಳೆಯೊಬ್ಬರು ದತ್ತು ಪಡೆದಿದ್ದಾರೆ. ಜುಲೈ 15ರಂದು ಎರಡೂ ಹೆಣ್ಣು ನಾಯಿಗಳು ದೆಹಲಿಯಿಂದ ಕೆನಡಾಕ್ಕೆ ತೆರಳಲಿವೆ.
ಶ್ವಾನ ಪ್ರೇಮಿ ಡಾ.ನವನೀತ್ ಕೌರ್ ಅನಿಮಲ್ ವೆಲ್ಫೇರ್ ಅಂಡ್ ಕೇರ್ ಸೊಸೈಟಿಯ ಸ್ಥಾಪಕರಾಗಿದ್ದಾರೆ. ಬೀದಿ ನಾಯಿಗಳಿಗೆ ಯಾರೂ ರಕ್ಷಕರಿಲ್ಲ. ಅವುಗಳು ಬೀದಿ - ಬೀದಿಗಳಲ್ಲಿ ಓಡಾಡುತ್ತಿರುತ್ತವೆ. ಅನಾರೋಗ್ಯ ಅಥವಾ ಗಾಯಗೊಂಡ ನಾಯಿಗಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂಬ ಆಲೋಚನೆ ಮಾಡಿ 2020ರ ಲಾಕ್‌ಡೌನ್ ಸಂದರ್ಭದಲ್ಲಿ ಈ ಸೊಸೈಟಿಯನ್ನು ಡಾ.ನವನೀತ್ ಕೌರ್ ಆರಂಭಿಸಿದ್ದಾರೆ.
ಡಾ.ನವನೀತ್ ಕೌರ್ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಮೃತಸರದಲ್ಲಿ ಮನೆಯೊಂದನ್ನು ಹೊಂದಿದ್ದಾರೆ. ಅಮೃತಸರದಲ್ಲಿ ಸುಖ್ವಿಂದರ್ ಸಿಂಗ್ ಜಾಲಿ ಎಂಬುವರು ಅನಿಮಲ್ ವೆಲ್ಫೇರ್ ಅಂಡ್ ಕೇರ್ ಸೊಸೈಟಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸೂಸೈಟಿ ಮೂಲಕ ಅನೇಕ ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಬೀದಿ ನಾಯಿಗಳ ಪೈಕಿ ಲಿಲಿ ಮತ್ತು ಡೈಸಿ ಎಂಬ ಶ್ವಾನಗಳು ಈಗ ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.
ಈ ಕುರಿತು ಡಾ.ನವನೀತ್ ಕೌರ್ ಮಾಹಿತಿ ನೀಡಿದ್ದು, ಕೆನಡಾದ ಬ್ರಾಂಡಾ ಎಂಬ ಮಹಿಳೆಯು ಲಿಲಿ ಮತ್ತು ಡೈಸಿಯನ್ನು ದತ್ತು ಪಡೆದಿದ್ದಾರೆ. ಈ ಕುರಿತ ದಾಖಲೆಗಳು ಪೂರ್ಣಗೊಂಡಿದ್ದು, ಜುಲೈ 15ರಂದು ಎರಡೂ ಶ್ವಾನಗಳನ್ನು ದೆಹಲಿಯಿಂದ ಕೆನಡಾಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದುವರೆಗೆ ಇದೇ ರೀತಿಯಾಗಿ ಆರು ಭಾರತೀಯ ನಾಯಿಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು.
ಈ ಬೀದಿ ಶ್ವಾನಗಳನ್ನು ನಮ್ಮ ಸಂಸ್ಥೆಯಲ್ಲಿ ಯಾರೋ ಬಿಟ್ಟು ಹೋಗಿದ್ದರು. ಆಗ ಅವುಗಳ ಸ್ಥಿತಿ ಚೆನ್ನಾಗಿರಲಿಲ್ಲ. ಅವುಗಳಿಗೆ ಕಳೆದ ಇಂದು ತಿಂಗಳಿಂದ ಚಿಕಿತ್ಸೆ ನೀಡಿ ಉತ್ತಮವಾಗಿ ಆರೈಕೆ ಮಾಡಲಾಗಿದೆ. ಭಾರತೀಯರಾದ ನಾವು ಬೀದಿ ನಾಯಿಗಳನ್ನು ಸಾಕುವುದಿಲ್ಲ. ಆದರೆ, ಈ ವಿದೇಶಿ ನಾಗರಿಕರಿಗೆ ತಮ್ಮ ತಳಿಗಳು ತುಂಬಾ ಇಷ್ಟ. ವಿಶೇಷವಾಗಿ ಕೆನಡಾದ ಜನರು ಭಾರತೀಯ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಬಹಳ ಉತ್ಸುಕರಾಗಿದ್ದಾರೆ. ಏಕೆಂದರೆ, ಭಾರತೀಯ ನಾಯಿಗಳು ಹೆಚ್ಚು ಸ್ನೇಹಪರ ಎಂದು ವಿದೇಶಿಗರು ಭಾವಿಸುತ್ತಾರೆ. ಇದಕ್ಕಾಗಿಯೇ ಕೆನಡಾದ ಬ್ರಾಂಡಾ ಈ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಪೊಲೀಸ್ ಇಲಾಖೆಗೆ 1.50 ಲಕ್ಷ ರೂ. ಮೌಲ್ಯದ ಬೆಲ್ಜಿಯಂ ಮಾಲಿನೋಯಿಸ್ ಶ್ವಾನ ಗಿಫ್ಟ್!