ಶ್ರೀಕಾಕುಳಂ: ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ರಣಸ್ಥಳಂ ವಲಯದ ಬಂಟುಪಲ್ಲಿಯಲ್ಲಿ ನಡೆದಿದೆ.
ಅಪಘಾತದಲ್ಲಿ ರಣಸ್ಥಳಂನ ದುವ್ವಣ್ಣಪೇಟ ಗ್ರಾಮದ ದುವ್ವಣ್ಣ ಲಕ್ಷ್ಮಣ ರಾವ್ ಮತ್ತು ವಿಶಾಖಪಟ್ಟಣಂನ ಅಂಬಟಿ ತ್ರಿನಾಥ್ ರಾವ್ ಪ್ರಾಣ ಕಳೆದುಕೊಂಡಿದ್ದಾರೆ. ಎಚೆರ್ಲಾ ವಲಯದ ಧರ್ಮವರಂ ಗ್ರಾಮದ ಸಾಧು ಸತೀಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.
ತ್ರಿನಾಥ್ ರಾವ್ ಮತ್ತು ಸತೀಶ್ ವಿಶಾಖಪಟ್ಟಣಂನಿಂದ ದ್ವಿಚಕ್ರ ವಾಹನದಲ್ಲಿ ಎಚೆರ್ಲಾ ತಾಲೂಕಿನ ಧರ್ಮವರಂಗೆ ಹೋಗುತ್ತಿದ್ದರು. ರಸ್ತೆಯ ಮಧ್ಯದಲ್ಲಿ ಲಕ್ಷ್ಮಣ ರಾವ್ ತಮ್ಮ ಬೈಕ್ಗೆ ಪೆಟ್ರೋಲ್ ತುಂಬಿಸಿಕೊಂಡು ತಪ್ಪಾದ ಮಾರ್ಗದಲ್ಲಿ ಬಂಕರ್‌ನಿಂದ ಹೊರಬರುತ್ತಿದ್ದಾಗ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಲಕ್ಷಣರಾವ್ ಮತ್ತು ತ್ರಿನಾಥ್ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ಅಪಘಾತದ ಬಗ್ಗೆ ಎರಡೂ ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀಕಾಕುಳಂ ಜನರಲ್ ಆಸ್ಪತ್ರೆಗೆ ರವಾನಿಸಲಾಯಿತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.