ಸೋಪಿಯಾನ್(ಜಮ್ಮು ಕಾಶ್ಮೀರ): ಇತ್ತೀಚೆಗೆ ಪ್ರಬಲ ಸುಧಾರಿತ ಸ್ಪೋಟಕ (ಐಇಡಿ) ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 27 ರಂದು ಬನಿಹಾಲ್ ನಿವಾಸಿಯಾದ ನದೀಮುಲ್ ಹಕ್ ಎಂಬಾತನನ್ನು 5.5 ಕೆ.ಜಿ ಐಇಡಿಯೊಂದಿಗೆ ಜಮ್ಮು ನಗರದ ಹೊರವಲಯ ಬತಿಂದಿಯಲ್ಲಿ ಬಂಧಿಸಲಾಗಿತ್ತು. ಆರೋಪಿಯ ಬಂಧನದ ಬಳಿಕ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬ ವಿಚಾರ ಬಯಲಾಗಿತ್ತು.
ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ಇನ್ನಿಬ್ಬರು ಆರೋಪಿಗಳ ಹೆಸರನ್ನು ಬಾಯ್ಬಿಟ್ಟಿದ್ದ. ಇದರ ಆಧಾರದ ಮೇಲೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ : ವಂಚಕನಿಂದ ಲಂಚ ಕೇಳಿದ ಆರೋಪ: ಗುಜರಾತ್‌ನ ಇಬ್ಬರು ಅಧಿಕಾರಿಗಳು ಸಿಬಿಐ ಬಲೆಗೆ
ಸೋಪಿಯಾನ್ನ ನದೀಮ್ ಅಯ್ಯೂಬ್ ಮತ್ತು ಬನಿಹಾಲ್ನ ತಾಲಿಬುರ್ರಹ್ಮಾನ್ ಬಂಧಿತ ಆರೋಪಿಗಳು. ಇವರು ವಿಚಾರಣೆ ವೇಳೆ ತಾವು ವ್ಯಕ್ತಿಯೊಬ್ಬನ ನಿರ್ದೇಶನದ ಮೇರೆಗೆ ದುಷ್ಕೃತ್ಯಕ್ಕೆ ಸಂಚು ರೂಪಿಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಜಮ್ಮುವಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಐಇಡಿ ಸ್ಫೋಟಿಸಲು ತಮಗೆ ನಿರ್ದೇಶನ ನೀಡುತ್ತಿದ್ದ ವ್ಯಕ್ತಿ ಸೂಚಿಸಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದಾರೆ. ಜಮ್ಮುವಿನಲ್ಲಿ ಸ್ಪೋಟ ನಡೆಸುವ ಸಲುವಾಗಿಯೇ ಪ್ರಮುಖ ಆರೋಪಿ ನದೀಮ್ ಬನಿಹಾಲ್ನಿಂದ ಜಮ್ಮುವಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಡ್ರೋನ್ ಮೂಲಕ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸ್ಫೋಟಕ ಐಇಡಿ ಹಾಕಿ ಹೋಗಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.