ವನಪರ್ತಿ(ತೆಲಂಗಾಣ): 30 ಜನ ಕೂಲಿಯಾಳುಗಳು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಏಳು ಜನರು ಗಾಯಗೊಂಡು ಮತ್ತೊಬ್ಬರು ಕೋಮಾ ಸ್ಥಿತಿಗೆ ಜಾರಿರುವ ದುರ್ಘಟನೆ ಕೊತ್ತಕೋಟ ತಾಲೂಕಿನ ವಿಲಿಯಂಕೊಂಡ ಬಳಿ ನಡೆದಿದೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೌತಾಳಂ ತಾಲೂಕಿನ ಉರುಕುಂದ, ಪೆದ್ದಕಡಬೂರು ತಾಲೂಕಿನ ರಂಗಾಪುರ ಗ್ರಾಮದ ಒಟ್ಟು 30 ಜನ ಕೂಲಿ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಹತ್ತಿ ಬಿಡಿಸುವ ಕೆಲಸಕ್ಕಾಗಿ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಗೆ ಶನಿವಾರ ರಾತ್ರಿ ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದರು.
ಟ್ರ್ಯಾಕ್ಟರ್ನಲ್ಲಿ ಬರುತ್ತಿದ್ದ ಕೂಲಿಯಾಳುಗಳು ರವಿವಾರ ಬೆಳಗ್ಗೆ 5 ಗಂಟೆಗೆ ವನಪರ್ತಿ ಜಿಲ್ಲೆಯ ವಿಲಿಯಂಕೊಂಡ ತಲುಪಿದೆ. ಈ ವೇಳೆ ರಸ್ತೆಬದಿಗೆ ಟ್ರ್ಯಾಕ್ಟರ್ ಟ್ರಾಲಿ ಸರಿದು ಪಲ್ಟಿಯಾಗಿದೆ. ಸ್ಥಳದಲ್ಲೇ ಉರುಕುಂದ ನಿವಾಸಿ ದೀಪಿಕಾ (19) ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಗವೇಣಿ (25), ವೀರಣ್ಣ, ಸುನೀಲ್ ಕುಮಾರ್ ಹಾಗು ಸುಜಾತ ಸೇರಿದಂತೆ ಅನೇಕರು ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ವೀರಣ್ಣ ಮತ್ತು ನಾಗವೇಣಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರನ್ನು ಕರ್ನೂಲ್ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೇ ರಂಗಾಪುರ ನಿವಾಸಿ ನಾಗವೇಣಿ ಸಾವನ್ನಪ್ಪಿದ್ದು, ವೀರಣ್ಣ ಕೋಮಾಗೆ ಜಾರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ದೀಪಿಕಾ ತಾಯಿ ಸುಜಾತಾ ಮತ್ತು ಸಹೋದರ ಸುನೀಲ್ ಕುಮಾರ್ಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದೀಪಿಕಾ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂದಿನ ವರ್ಷ ಮಗಳ ಮದುವೆ ಮಾಡುವ ಉದ್ದೇಶದಿಂದಾಗಿ ಹಣ ಸಂಗ್ರಹಿಸುವ ಕಾರಣಕ್ಕೆ ದೂರದ ಊರಿಗೆ ಪ್ರಯಾಣಿಸಲು ಇಚ್ಛೆಸಿದ್ದೆವು. ಅದರಂತೆ ಕೂಲಿ ಕೆಲಸಕ್ಕೆ ಸಿದ್ಧವಾಗಿ ನಡೆದೆವು. ಈಗ ಆಕೆಯನ್ನೇ ಕಳೆದುಕೊಂಡಿದ್ದೇವೆ ಎಂದು ಯುವತಿ ಪೋಷಕರು ಮತ್ತು ಸಂಬಂಧಿಕರು ಕಣ್ಣೀರಿಟ್ಟರು. ಇನ್ನು ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದ 30 ಜನರೆಲ್ಲರೂ ಸಂಬಂಧಿಗಳೇ ಎಂಬುದು ಇಲ್ಲಿ ಗಮನಾರ್ಹ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.