ಕೊಚ್ಚಿ: ಕೇರಳ ರಾಜ್ಯಪಾಲರ ಕಾನೂನು ಸಲಹೆಗಾರ ಮತ್ತು ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸ್ಥಾಯಿ ಸಲಹೆಗಾರರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. 2009ರ ಫೆಬ್ರವರಿಯಲ್ಲಿ ರಾಜ್ಯಪಾಲರ ಗೌರವ ಕಾನೂನು ಸಲಹೆಗಾರರಾಗಿ ನೇಮಕಗೊಂಡಿದ್ದ ಹಿರಿಯ ವಕೀಲ ಕೆ.ಜಾಜು ಬಾಬು ಮತ್ತು ಕುಲಪತಿಗಳ ಸ್ಥಾಯಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಯು.ವಿಜಯಲಕ್ಷ್ಮಿ ರಾಜೀನಾಮೆ ನೀಡಿದವರಾಗಿದ್ದಾರೆ.
ಇಬ್ಬರೂ ಒಂದೇ ಕಾನೂನು ಸಂಸ್ಥೆಯವರಾಗಿದ್ದು, ಕೇರಳದ 11 ವಿಶ್ವವಿದ್ಯಾಲಯಗಳ ಕುಲಪತಿಗಳು ವಿಶ್ವವಿದ್ಯಾಲಯದ ಸೆನೆಟ್ ಮತ್ತು ವೈಸ್ ಚಾನ್ಸೆಲರ್ ವಿರುದ್ಧ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತೆಗೆದುಕೊಂಡ ಕ್ರಮಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವ್ಯಾಜ್ಯದಲ್ಲಿ ರಾಜ್ಯಪಾಲರನ್ನು ಪ್ರತಿನಿಧಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕೆಲವೇ ಜನರ ಗುಂಪಿನ ಹಿಡಿತದಲ್ಲಿ ಕೇರಳ ಸರ್ಕಾರದ ಆಡಳಿತ: ರಾಜ್ಯಪಾಲರ ಆರೋಪ
ಜಾಜು ಬಾಬು ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, "ನಾನು ನನ್ನ ಸ್ಥಾನವನ್ನು ತೆರವು ಮಾಡುವ ಕ್ಷಣ ಬಂದಿದೆ. ನೀವು ನನಗೆ ಗೌರವಾನ್ವಿತ ಸ್ಥಾನ ನೀಡಿ, ವೃತ್ತಿಪರ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಜೊತೆಗೆ ಎಲ್ಲಾ ಕಾನೂನು ಕೆಲಸ ಕಾರ್ಯದಲ್ಲಿ ಸಹಕರಿಸಿದ ರಾಜಭವನದ ಪ್ರಧಾನ ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ಕೃತಜ್ಞತೆ ಹೇಳುತ್ತೇನೆ" ಎಂದಿದ್ದಾರೆ.
ವಿಜಯಲಕ್ಷ್ಮಿ ಸಹ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ.