ಕರ್ನೂಲ್(ಆಂಧ್ರಪ್ರದೇಶ): ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೌತಾಲಂನ ಕಾಮಾವರಂ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು, ಘಟನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಮತ್ತು ಐವರು ಗಾಯಗೊಂಡಿದ್ದಾರೆ.
ಕಾಮಾವರಂ ಗ್ರಾಮದವರಾದ ಬೋಯ ಮುನೀಂದ್ರಯ್ಯ ಅವರಿಗೆ 7 ಎಕರೆ ಕೃಷಿ ಭೂಮಿ ಇದೆ. ಅಲ್ಲದೇ ಬಳಕೆಯಾಗದ ಒಂದಿಷ್ಟು ಪ್ರದೇಶವೂ ಅಲ್ಲಿತ್ತು. ಅದರಲ್ಲಿ ವಡ್ಡೆ ಮಲ್ಲಿಕಾರ್ಜುನ ಎಂಬುಬವರು ಸಾಗುವಳಿ ಮಾಡುತ್ತಿದ್ದರು. ಮುನೀಂದ್ರಯ್ಯ ತಮ್ಮ ಜಮೀನನ್ನು ಮಾರಾಟಕ್ಕೆ ಇಟ್ಟಿದ್ದು, ಅದನ್ನು ಮಲ್ಲಿಕಾರ್ಜುನ ಖರೀದಿಸಲು ಮುಂದೆ ಬಂದಿದ್ದರು. ಮುಂಗಡವಾಗಿ ಒಂದಿಷ್ಟು ಹಣ ಸಹ ಕೊಟ್ಟಿದ್ದರು.
ಆದರೆ, ಮಲ್ಲಿಕಾರ್ಜುನ ಕುಟುಂಬ ಪೂರ್ಣ ಹಣ ಹಾಗೂ ದಾಖಲಾತಿ ನೀಡದೇ ಜಮೀನಿನಲ್ಲಿ ಸಾಗುವಳಿ ಆರಂಭಿಸಿತ್ತು. ಇದಕ್ಕೆ ಮುನೀಂದ್ರಯ್ಯ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಮುನೀಂದ್ರಯ್ಯ ಅವರ ಪರ ತೀರ್ಪು ಬಂದರೂ ಮಲ್ಲಿಕಾರ್ಜುನ ಜಮೀನು ಬಿಟ್ಟಿರಲಿಲ್ಲ.
ಈ ವಿಚಾರವಾಗಿ ಮುನೀಂದ್ರಯ್ಯ ಅವರು ಸ್ಥಳೀಯ ವೈಎಸ್‌ಆರ್‌ಸಿಪಿ ಮುಖಂಡ ಮಹೇಂದ್ರರೆಡ್ಡಿ ಅವರ ಬೆಂಬಲ ಕೋರಿದರು. ವಿಷಯ ತಿಳಿದ ಮಲ್ಲಿಕಾರ್ಜುನ ಬಿಜೆಪಿ ಮುಖಂಡರ ಜೊತೆ ಮಾಧ್ಯಮಗೋಷ್ಠಿ ನಡೆಸಿದ್ದರು.
ಅಲ್ಲದೇ ಭೂಗಳ್ಳರ ಹೆಸರಿನಲ್ಲಿ ವೈಎಸ್‌ಆರ್‌ಸಿಪಿ ನಾಯಕನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತಂತೆ. ಹಾಗಾಗಿ ವೈಎಸ್‌ಆರ್‌ಸಿಪಿ ನಾಯಕ ಮಹೇಂದ್ರ ರೆಡ್ಡಿ, ಮಲ್ಲಿಕಾರ್ಜುನ ಅವರ ಮನೆಗೆ ತನ್ನ ಬೆಂಬಲಿಗರನ್ನು ಕಳುಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಏಕೆ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದರು.
ಮಲ್ಲಿಕಾರ್ಜುನ ಅವರ ಮನೆಗೆ ಸರಪಂಚ್ ಸಹೋದರ ಶಿವಪ್ಪ ಸೇರಿ 30 ಮಂದಿ ಬಂದಿದ್ದರು. ಆಗ ಮಲ್ಲಿಕಾರ್ಜುನ, ರಾಜು, ರಾಮಾಂಜಿ, ಈಶ್ವರ್, ಗೋಪಾಲ್, ಚಂದ್ರು ಸೇರಿ ಕೆಲ ಮಹಿಳೆಯರು ಏಕಾಏಕಿ ಕಲ್ಲು, ಮೆಣಸಿನ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಪ್ರತಿರೋಧ ತೋರಿದವರಿಗೆ ಆಸಿಡ್ ಸಹ ಎರಚಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಎನ್ಟಿಪಿಸಿ ಪರೀಕ್ಷೆ ವಿವಾದ: ಬಿಹಾರದಲ್ಲಿ ಇಂದು ಬಂದ್, ನಾಲ್ವರ ಬಂಧನ
ಈ ಸಂದರ್ಭದಲ್ಲಿ ಶಿವಪ್ಪ ಹಾಗೂ ಭಾಸ್ಕರ್ ಅಲಿಯಾಸ್ ಗಟ್ಟು ಈರಣ್ಣ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಶಿವಪ್ಪ ಸ್ಥಳದಲ್ಲೇ ಸಾವನ್ನದರೆ, ಭಾಸ್ಕರ್ ಅಲಿಯಾಸ್ ಗಟ್ಟು ಈರಣ್ಣ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇನ್ನೂ ಈ ವೇಳೆ ನಡೆದ ಘರ್ಷಣೆಯಲ್ಲಿ ಸತ್ಯಪ್ಪ, ಬಜಾರಪ್ಪ, ಅಯ್ಯಪ್ಪ, ಪೆದ್ದತಿಮೋತಿ ಮತ್ತು ಇಸ್ಮಾಯಿಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಆದೋನಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದರಲ್ಲಿ ಬಜಾರಪ್ಪ ಮತ್ತು ಸತ್ಯಪ್ಪ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕರ್ನೂಲ್ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿರುವವವರೊಂದಿಗೆ ಮಾಹಿತಿ ಪಡೆದಿದ್ದಾರೆ. ದಾಳಿ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಾಲ್ಕು ವಿಶೇಷ ತಂಡಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ