ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಜೋಸ್ ತಮ್ಮ ಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಇಂದು ಕೈಗೊಳ್ಳಲಿದ್ದಾರೆ. ಜೆಫ್ ಅವರ ಸ್ಪೇಸ್ ಟೂರಿಸಂ ಕಂಪನಿ ಬ್ಲೂ ಒರಿಜಿನ್ ಇವರು ಬಾಹ್ಯಾಕಾಶಕ್ಕೆ ತೆರಳಲಿರುವ ಈ ರಾಕೆಟ್ ಅನ್ನು ಸಿದ್ಧಪಡಿಸಿದೆ. ಬ್ಲೂ ಒರಿಜಿನ್ನ ಟಿಬಿಸಿ ಕ್ಯಾಪ್ಸೂಲ್ ತಂಡ ಈ ವಿಶೇಷ ರಾಕೆಟ್ ಅನ್ನು ತಯಾರಿಸಿದ್ದು, ಮಹಾರಾಷ್ಟ್ರದ 30 ವರ್ಷದ ಮಹಿಳೆಯೊಬ್ಬರು ಈ ತಂಡದಲ್ಲಿರುವುದು ವಿಶೇಷವಾಗಿದೆ.
ಬ್ಲೂ ಒರಿಜಿನ್ನ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಅನ್ನು ನಿರ್ಮಿಸಿದ ಎಂಜಿನಿಯರ್ಗಳ ತಂಡದಲ್ಲಿ ಮಹಾರಾಷ್ಟ್ರದ 30ವರ್ಷದ ಸಂಜಲ್ ಗವಾಂಡೆ ಕೂಡಾ ಇದ್ದರು ಎಂಬುದು ಹೆಮ್ಮೆಯ ವಿಚಾರ. ಸಂಜಲ್ ಮುಂಬೈನ ಕಲ್ಯಾಣ್ ನಲ್ಲಿ ಜನಿಸಿದ್ದರು. ಬಾಲ್ಯದಲ್ಲಿಯೇ ಬಾಹ್ಯಾಕಾಶ ನೌಕೆ ನಿರ್ಮಿಸುವ ಆಕೆ ಕನಸು ಇದೀಗ ನನಸಾಗಿದೆ.
ಎರಡೂ ಬಾಹ್ಯಾಕಾಶ ಯಾನದಲ್ಲಿ ಭಾರತೀಯ ಮಹಿಳೆಯರ ಪ್ರಮುಖ ಪಾತ್ರ:
ಈ ಮೊದಲು ಜುಲೈ 11 ರಂದು ರಿಚರ್ಡ್ ಬ್ರಾನ್ಸನ್ ಸಂಸ್ಥಾಪಿಸಿದ ವರ್ಜಿನ್ ಗ್ಯಾಲಕ್ಟಿಕ್ (Virgin Galactic) ಸ್ಪೇಸ್ಫ್ಲೈಟ್ ಕಂಪನಿಯಲ್ಲಿ ತಯಾರಾದ ವಿಎಸ್ಎಸ್ ಯುನಿಟಿ 22 ಗಗನ ನೌಕೆಯಲ್ಲಿ ಭಾರತೀಯ ಮೂಲದ ಗಗನಯಾತ್ರಿ ಸಿರಿಶಾ ಬಾಂದ್ಲಾ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶಕ್ಕೆ ಹಾರಿದ್ದರು. ಒಟ್ಟು ಆರು ಯಾತ್ರಿಗಳಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ನೆಲೆಸಿರುವ 34 ವರ್ಷದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ.
90 ನಿಮಿಷಗಳ ಈ ಯಾನ ಇಡೀ ವಿಶ್ವದ ಗಮನಸೆಳೆದಿದೆ. ಸಹಸ್ರ ಕೋಟಿಯ ಅಧಿಪತಿ ಉದ್ಯಮಿ, ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಯ ಒಡೆಯ ರಿಚರ್ಡ್ ಬ್ರಾನ್ಸನ್ ಜತೆ ಸಿರಿಶಾ ಸಹ ಅಂತರಿಕ್ಷಕ್ಕೆ ಹಾರಿರುವುದು ಭಾರತಕ್ಕೆ ಹೆಮ್ಮೆಯ ವಿಚಾರವೂ ಹೌದು.
ಏರೋನಾಟಿಕಲ್ ಎಂಜಿನಿಯರ್ ಆಗಿರುವ ಪರ್ದ್ಯೂ ವಿಶ್ವವಿದ್ಯಾಲಯದ ಪದವೀಧರೆ ಸಿರಿಶಾ, 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯಲ್ಲಿ ಸೇರ್ಪಡೆಗೊಂಡರು. ಪ್ರಸ್ತುತ ಇದೇ ಸಂಸ್ಥೆಯಲ್ಲಿ ಸರ್ಕಾರಿ ವ್ಯವಸ್ಥೆಗಳ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ ಪದವಿಯನ್ನೂ ಸಹ ಸಿರಿಶಾ ಪಡೆದಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಳಿಕ ಅಮೆರಿಕದ ಹೂಸ್ಟನ್‌ನಲ್ಲಿ ಬೆಳೆದರು. ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಪಾತ್ರರಾಗಿದ್ದಾರೆ.
![Two Indian girls in both billanier's Space trip](https://etvbharatimages.akamaized.net/etvbharat/prod-images/12510095_jk.jpg)
ಇದನ್ನೂ ಓದಿ: ನಾಳೆ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಯ ಬಾಹ್ಯಾಕಾಶ ಯಾನ: ರೋಚಕ ಪ್ರವಾಸದಲ್ಲಿ ಅತ್ಯಂತ ಕಿರಿಯ, ಹಿರಿಯ ಗಗನಯಾತ್ರಿ!
ಇದೀಗ ಅಮೆಜಾನ್ ಸಂಸ್ಥಾಪಕ, ಉದ್ಯಮಿ ಜೆಫ್ ಬೆಜೋಸ್ ತಮ್ಮ ಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಇಂದು ಕೈಗೊಳ್ಳಲಿದ್ದು, ಅವರ ಪ್ರವಾಸದ ರಾಕೆಟ್ ನಿರ್ಮಾಣದಲ್ಲಿ ಭಾರತದ ಸಂಜಲ್ ಅವೆರ ಪಾತ್ರ ಇರುವುದು ಭಾರತೀಯರ ಹೆಮ್ಮೆಗೆ ಕಾರಣವಾಗಿದೆ.
"ನನ್ನ ಬಾಲ್ಯದ ಕನಸು ನನಸಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಟೀಮ್ ಬ್ಲೂ ಒರಿಜಿನ್ನ ಭಾಗವಾಗಲು ನನಗೆ ಹೆಮ್ಮೆ ಇದೆ" ಎಂದು ಸಂಜಲ್ ಗವಾಂಡೆ ಹೇಳಿದ್ದಾರೆ. ಸಂಜಲ್ ಗವಾಂಡೆ ಕಲ್ಯಾಣ್-ಡೊಂಬಿವ್ಲಿ ಮುನ್ಸಿಪಲ್ ಕಾರ್ಪೋರೇಶನ್‌ನ ನಿವೃತ್ತ ಉದ್ಯೋಗಿ ಅಶೋಕ್ ಗವಾಂಡೆ ಮತ್ತು ನಿವೃತ್ತ ಎಂಟಿಎನ್‌ಎಲ್ ಉದ್ಯೋಗಿ ಸುರೇಖಾ ಅವರ ಪುತ್ರಿ.
ಮುಂಬೈ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ, ಸಂಜಲ್ ಗವಾಂಡೆ ಮಿಚಿಗನ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಎಸ್‌ಗೆ ತೆರಳಿದರು. "ಅವರು ವಿಸ್ಕಾನ್ಸಿನ್‌ನಲ್ಲಿ ಮಾಸ್ಟರ್ಸ್ ಮುಗಿಸಿದ ನಂತರ ಮರ್ಕ್ಯುರಿ ಮೆರೈನ್‌ನೊಂದಿಗೆ ಕೆಲಸ ಮಾಡಿದರು. ನಂತರ ಅವರು ಕ್ಯಾಲಿಫೋರ್ನಿಯಾದ ಆರೆಂಜ್ ಸಿಟಿಯಲ್ಲಿ ಟೊಯೋಟಾ ರೇಸಿಂಗ್ ಅಭಿವೃದ್ಧಿಯೊಂದಿಗೆ ಕೆಲಸ ಮಾಡಲು ಹೋದರು" ಎಂದು ಆಕೆಯ ತಂದೆ ಅಶೋಕ್ ಗವಾಂಡೆ ತಿಳಿಸಿದ್ದಾರೆ.
2016 ರಲ್ಲಿ ಪೈಲಟ್ ಪರವಾನಗಿ ಪಡೆದ ನಂತರ, ಸಂಜಲ್ ಗವಾಂಡೆ ನಾಸಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಪೌರತ್ವ ಸಮಸ್ಯೆಗಳಿಂದಾಗಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ನಂತರ ಬ್ಲೂ ಒರಿಜಿನ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು ಮತ್ತು ಸಿಸ್ಟಮ್ಸ್ ಎಂಜಿನಿಯರ್ ಆಗಿ ಆಯ್ಕೆಯಾದರು ಎಂದು ಅವರ ತಾಯಿ ಹೇಳಿದ್ದಾರೆ.
ಇದನ್ನೂ ಓದಿ: ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಬಳಿಕ ಅಂತರಿಕ್ಷಕ್ಕೆ ಹಾರಿದ ಭಾರತೀಯ ಗಗನಯಾತ್ರಿ ಸಿರಿಶಾ!