ನಾಗಪುರ(ಮಹಾರಾಷ್ಟ್ರ): ಪ್ರಪಂಚ ಬದಲಾಗುತ್ತಿದೆ. ಸುತ್ತಲಿನ ಪರಿಸರದ ವಿಚಾರವಾಗಿ ಮಾತ್ರವಲ್ಲದೇ, ಮಾನವನ ಆಲೋಚನೆ ಮತ್ತು ನಡವಳಿಕೆಗಳಲ್ಲೂ ಭಾರಿ ಬದಲಾವಣೆ ಕಂಡು ಬರುತ್ತಿದೆ. ಒಂದೊಮ್ಮೆ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದ್ದ ಸಲಿಂಗಿ ವಿವಾಹ ಈಗ ಸಾಮಾನ್ಯ ಎಂಬಂತಾಗಿದ್ದು, ಮಹಾರಾಷ್ಟ್ರದ ನಾಗಪುರದಲ್ಲಿ ಇಬ್ಬರು ಮಹಿಳಾ ವೈದ್ಯರು ಈಗ ದಾಂಪತ್ಯಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ.
ಹೌದು, ಇಬ್ಬರು ಮಹಿಳೆಯರು ಮದುವೆಯಾಗಲು ನಿರ್ಧಾರ ಮಾಡಿದ್ದು, ಹಿಂದಿನ ವಾರವಷ್ಟೇ ನಿಶ್ಚಿತಾರ್ಥ ಜರುಗಿದೆ. ಈ ನಿಶ್ಚಿತಾರ್ಥಕ್ಕೆ ಅವರಿಟ್ಟ ಹೆಸರು 'ಕಮಿಟ್ಮೆಂಟ್ ರಿಂಗ್ ಸಮಾರಂಭ' ಎಂದು. ಇನ್ನು ಕೆಲವೇ ದಿನಗಳಲ್ಲಿ ಅವರು ದಾಂಪತ್ಯಕ್ಕೆ ಕಾಲಿಡಲು ಎಲ್ಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಗೋವಾದಲ್ಲಿ ವಿವಾಹ ಸಮಾರಂಭ ನಡೆಸಲು ಪ್ಲಾನ್ ಮಾಡಿದ್ದಾರೆ.
ಪರೊಮಿತಾ ಮುಖರ್ಜಿ ಮತ್ತು ಸುರಭಿ ಮಿತ್ರ ಎಂಬುವರೇ ಈ ಅಪರೂಪದ ದಾಂಪತ್ಯಕ್ಕೆ ಕಾಲಿಡುತ್ತಿರುವ ವೈದ್ಯೆಯರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರೊಮಿತಾ ಮುಖರ್ಜಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಇದನ್ನು ನಾವು ಜೀವಮಾನದ ಬದ್ಧತೆ ಎಂದು ಕರೆಯುತ್ತೇವೆ ಎಂದಿದ್ದಾರೆ.
2013ರಿಂದ ನನ್ನ ಲೈಂಗಿಕ ಹಿತಾಸಕ್ತಿ ಬಗ್ಗೆ ನನ್ನ ತಂದೆಗೆ ಈ ವಿಚಾರ ತಿಳಿದಿತ್ತು. ಆದರೆ, ತಾಯಿಗೆ ತಿಳಿದಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ ಅವರು ಮೊದಲಿಗೆ ಶಾಕ್ಗೆ ಒಳಗಾದರೂ, ನಂತರ ಮದುವೆಗೆ ಒಪ್ಪಿದ್ದಾರೆ ಎಂದು ಪರೊಮಿತಾ ಮುಖರ್ಜಿ ಹೇಳಿದ್ದಾರೆ. ಸುರಭಿ ಮಿತ್ರ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನ್ನ ಮನೆಯವರಿಗೆ ಗೊತ್ತಿತ್ತು, ಆದರೆ ವಿರೋಧಿಸಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಚಿಲಿಕಾ ಸರೋವರದಲ್ಲಿ ಪಕ್ಷಿ ಗಣತಿ: ಒಂದೂವರೆ ಲಕ್ಷ ಪಕ್ಷಿಗಳು 'ಗೈರು'