ಸಿದ್ಧಿ(ಮಧ್ಯಪ್ರದೇಶ): ಕಾರು ಖರೀದಿ ಮಾಡುವ ಸೋಗಿನಲ್ಲಿ ಶೋ ರೂಮ್ಗೆ ಬಂದಿದ್ದ ಇಬ್ಬರು ಖತರ್ನಾಕ್ ಸಹೋದರರು ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರನ್ನೇ ಕದ್ದೊಯ್ದಿರುವ ಘಟನೆ ಮಧ್ಯಪ್ರದೇಶದ ಸಿದ್ಧಿಯಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕಾರು ಶೋ ರೂಮ್ಗೆ ಬಂದಿದ್ದ ಇಬ್ಬರು ಟಾಟಾ ಹ್ಯಾರಿಯರ್ ಕಾರನ್ನು ಇಷ್ಟಪಟ್ಟಿದ್ದು, ಟೆಸ್ಟ್ ಡ್ರೈವ್ ಮಾಡುವುದಾಗಿ ಕೇಳಿಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಕಾರಿನ ಕೀ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾರಿನೊಂದಿಗೆ ಇಬ್ಬರೂ ಪರಾರಿಯಾಗಿದ್ದಾರೆ. ಅವರನ್ನ ಬೆನ್ನಟ್ಟುವ ಯತ್ನಿಸಿದ ಸಿಬ್ಬಂದಿ ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ಫೈನಲ್ಗೆ ಲಗ್ಗೆ ಇಟ್ಟ ನಿಖಾತ್; ಸೋತರೂ ಬೆಳ್ಳಿ ಖಚಿತ
ಕಾರ್ಯಪ್ರವೃತ್ತರಾದ ಪೊಲೀಸ್ ವರಿಷ್ಠಾಧಿಕಾರಿ ಶೇಷಮಣಿ ಮಿಶ್ರಾ ನೇತೃತ್ವದ ತಂಡ, ಘಟನೆ ನಡೆದ ಐದು ತಾಸುಗಳಲ್ಲೇ ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ. ನಗರದ ಕೋಥರ್ ಮಾರ್ಗ್ನಲ್ಲಿ ಆರೋಪಿಗಳೊಂದಿಗೆ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಟಾಟಾ ಹ್ಯಾರಿಯರ್ ಕಾರು ದರೋಡೆ ಮಾಡಲು ಯೋಜಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಬಂಧಿತ ರಾಹುಲ್ ತಿವಾರಿ ಹಾಗೂ ದೀಪಕ್ ತಿವಾರಿ ಕಾರು ಕದ್ದ ಸಹೋದರರಾಗಿದ್ದು, ಈ ಹಿಂದೆ ಕೂಡ ಅವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ಶೇಷಮಣಿ ಮಿಶ್ರಾ ತಿಳಿಸಿದ್ದಾರೆ.