ಉನಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಮದುವೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 24 ವರ್ಷದ ಯುವಕನೋರ್ವ ಉತ್ತರಾಖಂಡದ ಹುಡುಗನೊಂದಿಗೆ ಮದುವೆ ಮಾಡಿಕೊಂಡಿದ್ದಾನೆ!. ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉನಾದಲ್ಲಿ ಈ ಮದುವೆ ನಡೆದಿದೆ. ಫೇಸ್‌ಬುಕ್ ಮೂಲಕ ಪರಸ್ಪರ ಪರಿಚಯವಾದ ಇಬ್ಬರು, ಕಳೆದ ಆರು ತಿಂಗಳ ಹಿಂದೆ ದೆಹಲಿಯ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿವರ: ಸುಮಾರು ಒಂದೂವರೆ ವರ್ಷಗಳ ಹಿಂದೆ ಇಬ್ಬರು ಯುವಕರು ಫೇಸ್ಬುಕ್ನಲ್ಲಿ ಸ್ನೇಹಿತರಾಗಿದ್ದಾರೆ. ಇದಾದ ಬಳಿಕ ಇಬ್ಬರ ನಡುವೆ ಮೊಬೈಲ್ ನಂಬರ್ ಶೇರ್ ಆಗಿದ್ದು, ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ತದನಂತರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೆಂದು ಹೆದರಿ ದೆಹಲಿಗೆ ಹೋಗಿದ್ದು, ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡು ಮನೆಗೆ ವಾಪಸ್ ಆಗಿದ್ದಾರೆ.
ವಿಷಯ ಗೊತ್ತಾಗಿದ್ದು ಹೇಗೆ?: ಉನಾ ನಗರದಲ್ಲಿ ಯುವಕನೋರ್ವ ತನ್ನ ಕಿರಿಯ ಸಹೋದರನೊಂದಿಗೆ ವಾಸವಾಗಿದ್ದ. ಅಲ್ಲಿಗೆ ಕಳೆದ ಕೆಲ ದಿನಗಳ ಹಿಂದೆ ಯುವಕನ ಸ್ನೇಹಿತ(ಮದುವೆ ಮಾಡಿಕೊಂಡ ವ್ಯಕ್ತಿ) ಉತ್ತರಾಖಂಡದಿಂದ ಆಗಮಿಸಿದ್ದ. ಇವರಿಬ್ಬರೂ ನಡೆದುಕೊಳ್ಳುವ ವರ್ತನೆಯಿಂದ ಅನುಮಾನಗೊಂಡು ಯುವಕನ ಸಹೋದರ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಇದರ ಬೆನ್ನಲ್ಲೇ ಇಬ್ಬರು ಯುವಕರು ಪೊಲೀಸ್ ಠಾಣೆಗೆ ತೆರಳಿ, ನಡೆದ ಸಂಗತಿ ಹೇಳಿದ್ದಾರೆ.
ಇದನ್ನೂ ಓದಿ: ಮೇಡ್ ಇನ್ ಚೀನಾ ಕಾರುಗಳ ಮಾರಾಟಕ್ಕೆ ಭಾರತದಲ್ಲಿ ಸಮ್ಮತಿಯಿಲ್ಲ: ಟೆಸ್ಲಾಗೆ ಗಡ್ಕರಿ ಕಿವಿಮಾತು
ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಎರಡು ಕುಟುಂಬದ ಸದಸ್ಯರನ್ನು ಕರೆದು ಮಾಹಿತಿ ನೀಡಿದ್ದಾರೆ. ಆದರೆ, ಇಬ್ಬರು ಯುವಕರು ಒಟ್ಟಿಗೆ ವಾಸಿಸುವುದಾಗಿ ಪಟ್ಟು ಹಿಡಿದಿದ್ದಾರೆ.