ಥಾಣೆ(ಮಹಾರಾಷ್ಟ್ರ): ರಸ್ತೆ ಉಲ್ಲಂಘನೆ ಮಾಡಿರುವ ಜೋಡಿ ಹಕ್ಕಿಗಳನ್ನು ಪ್ರಶ್ನೆ ಮಾಡಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆಯ ಮೀರಾ-ಭಾಯಂದರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಟ್ರಾಫಿಕ್ ಪೊಲೀಸ್ ಕಾರು ಸೀಜ್ ಮಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಅಮರ್ ಸಿಂಗ್ ಹಾಗೂ ಆತನ ಪತ್ನಿ ಮೀನಾ ಸಿಂಗ್ ಟ್ರಾಫಿಕ್ ಪೊಲೀಸ್ಗೆ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇದು ನಿಮ್ಮ ತಂದೆಯ ರಸ್ತೆನಾ? ಸಮವಸ್ತ್ರ ಹಾಕಿಕೊಂಡಿದ್ದಕ್ಕೆ ಇಂತಹ ಅಹಂಕಾರ ಬೇಡ, ಹಾಕಿಕೊಂಡಿರುವ ಸಮವಸ್ತ್ರ ತೆಗೆದುಹಾಕಿ ಜಗಳಕ್ಕೆ ಬನ್ನಿ, ಕೇವಲ 5 ನಿಮಿಷದಲ್ಲಿ ನಿಮ್ಮನ್ನು ಸೋಲಿಸುತ್ತೇನೆ ಎಂದು ಅಮರ್ ವಾರ್ನ್ ಮಾಡಿದ್ದಾನೆ. ಈ ವೇಳೆ ಮೀನಾ ಕೂಡ ಕೆಟ್ಟದಾಗಿ ವರ್ತಿಸಿದ್ದಾಳೆ.
ಇದನ್ನೂ ಓದಿರಿ: ಕರ್ನಾಟಕದ 10 ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿದೆ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 353ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಮೀರಾ ಗರ್ಭಿಣಿಯಾಗಿರುವ ಕಾರಣ ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ದಂಪತಿ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದರಿಂದ ಅದನ್ನ ಸೀಜ್ ಮಾಡಲಾಗಿತ್ತು ಎಂದು ಪೊಲೀಸ್ ಠಾಣೆ SHO ಕೈಲಾಶ್ ಬಾರ್ವೆ ತಿಳಿಸಿದ್ದಾರೆ.