ಧೋಲ್ಪುರ್ (ರಾಜಸ್ಥಾನ): 2020 ರಲ್ಲಿ ಹಣಬಲದ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸಲು ತಮ್ಮದೇ ಪಕ್ಷದ ಶಾಸಕರು ಬಂಡಾಯ ಎದ್ದಿದ್ದ ವೇಳೆ ಬಿಜೆಪಿ ನಾಯಕರಾದ ವಸುಂಧರಾ ರಾಜೇ ಮತ್ತು ಕೈಲಾಶ್ ಮೇಘವಾಲ್ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದ್ದರು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹೊಸ ಬಾಂಬ್ ಸಿಡಿಸಿದ್ದಾರೆ.
ಧೋಲ್ಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ನ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಗೆಹ್ಲೋಟ್, ಯಾವುದೇ ಒತ್ತಡವಿಲ್ಲದೆ ಕರ್ತವ್ಯ ನಿರ್ವಹಿಸಲು ಬಿಜೆಪಿಯಿಂದ ತೆಗೆದುಕೊಂಡಿರುವ ಹಣ ಹಿಂತಿರುಗಿಸಬೇಕು. 3 ವರ್ಷಗಳ ಹಿಂದೆ ತಮ್ಮ ಸರ್ಕಾರವನ್ನು ಉಳಿಯಲು ಸಾಧ್ಯವಾಗಿದ್ದು ಬಿಜೆಪಿಯ ಮೂವರು ನಾಯಕರಿಂದ ಎಂದು ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಮಾಜಿ ವಿಧಾನಸಭೆ ಸ್ಪೀಕರ್ ಕೈಲಾಶ್ ಮೇಘವಾಲ್ ಮತ್ತು ಶಾಸಕಿ ಶೋಭರಾಣಿ ಕುಶ್ವಾಹ ಅವರ ಹೆಸರನ್ನು ಪ್ರಸ್ತಾಪಿಸಿ ಹೊಗಳಿದರು.
2020 ರ ಜುಲೈ ತಿಂಗಳಿನಲ್ಲಿ ಸಚಿನ್ ಪೈಲಟ್ ಮತ್ತು ಇತರೆ 18 ಶಾಸಕರು ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ನಿಶ್ಚಿತ ಎಂದಾಗಿತ್ತು. ಸರಿಸುಮಾರು ಒಂದು ತಿಂಗಳ ಗೊಂದಲದ ಬಳಿಕ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಕೊನೆಗೂ ಬಿಕ್ಕಟ್ಟು ಕೊನೆಗೊಂಡಿತು. ನಂತರ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಯಿತು.
ನಾನು ಬಯಸಿದರೆ ಭೈರೋನ್ ಸಿಂಗ್ ಅವರ ಸರ್ಕಾರವನ್ನು ಉರುಳಿಸಬಹುದಿತ್ತು, ಆದರೆ ಅದು ಅನೈತಿಕ ಕೆಲಸ ಎಂದು ನಾನು ಹೇಳಿದ್ದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ಅಂದು ಅವರ ಪಕ್ಷದ ನಾಯಕರೇ ಅವರ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ : ಅಮಿತ್ ಶಾ, ಮೋದಿಗೆ ಧರ್ಮ, ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದೇ ಕಾಯಕ: ಅಶೋಕ್ ಗೆಹ್ಲೋಟ್
ಬಳಿಕ ಮಾತು ಮುಂದುವರಿಸಿದ ಅವರು, ಕೈಲಾಶ್ ಮೇಘವಾಲ್ ಮತ್ತು ವಸುಂಧರಾ ರಾಜೇ ಕೂಡ ಇದೇ ಮಾತನ್ನು ಹೇಳಿದ್ದಾರೆ. ಹಣಬಲದ ಮೇಲೆ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಸಂಪ್ರದಾಯ ನಮ್ಮಲ್ಲಿ ಇಲ್ಲ ಎಂದಿದ್ದಾರೆ ಎಂದರು. ನಂತರ ಕಳೆದ ವರ್ಷ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದ ಶಾಸಕಿ ಶೋಭಾರಾಣಿ ಕುಶ್ವಾಹ ಅವರನ್ನು ಗೆಹ್ಲೋಟ್ ಶ್ಲಾಘಿಸಿದರು. ಆಕೆ ದಿಟ್ಟ ಮಹಿಳೆ, ಶೋಭಾರಾಣಿ ನಮಗೆ ಬೆಂಬಲ ನೀಡಿದಾಗ ಬಿಜೆಪಿ ನಾಯಕರಿಗೆ ಆಘಾತವಾಗಿದ್ದು, ಅವರನ್ನು ಅಮಾನತುಗೊಳಿಸಿತು ಎಂದರು.
ಮೂರನೇ ಬಾರಿಗೆ ಪಕ್ಷದಿಂದ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದ್ದು, ಈ ಹಿಂದೆ ಏನಾಯಿತು ಎಂಬುದನ್ನು ಮರೆತು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಕರ್ತವ್ಯ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಿಗದಿಯಾಗಬಹುದು ಎಂದು ಗೆಹ್ಲೋಟ್ ತಿಳಿಸಿದರು.