ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಹುಲಿ ದಾಳಿಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಈ ವೇಳೆ ಇನ್ನೋರ್ವ ಬೈಕ್ ಸವಾರ ಸಮೀಪದ ಮರ ಏರಿ ಪ್ರಾಣ ಉಳಿಸಿಕೊಂಡಿದ್ದಾನೆ.
ಜಿಲ್ಲೆಯ ಬಿಸಾಲ್ಪುರ್ ಪ್ರದೇಶದ ಡಿಯೋರಿಯಾ ಗ್ರಾಮದ ನಿವಾಸಿ 42 ವರ್ಷದ ಕಂಧೈ, ಪುವಯಾನ್ ಪ್ರದೇಶದ ಜಲಾಲ್ಪುರ್ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ, ತನ್ನ ಸೋದರಳಿಯ ಸೋನು (22) ಮತ್ತು ಇನ್ನೊಬ್ಬ ವ್ಯಕ್ತಿ ವಿಕಾಸ್ ಜೊತೆ ವಾಪಸ್ ಬರುತ್ತಿದ್ದಾಗ ಹುಲಿ ದಾಳಿ ನಡೆಸಿದೆ.
ಘಟನೆಯಲ್ಲಿ ಕಂಧೈ ಮತ್ತು ಸೋನು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ವಿಕಾಸ್ ಮರ ಹತ್ತಿ ಕುಳಿತು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ನವೀನ್ ಕಂದೇಲ್ವಾಲ್ ಮಾಹಿತಿ ನೀಡಿದ್ದಾರೆ.
ಓದಿ : ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಚ್ಚಿ ಕೊಂದ ಅಣ್ಣ... ಎಸ್ಕೇಪ್ ಆಗಲು ಹೋಗಿ ಅಂದರ್
ಘಟನೆ ನಡೆದ ತಕ್ಷಣ ಕ್ಷೇತ್ರ ನಿರ್ದೇಶಕ ಜಾವೆದ್ ಅಖ್ತರ್ ಮತ್ತು ಪ್ರಾದೇಶಿಕ ಅರಣ್ಯ ಅಧಿಕಾರಿ (ಸಾಮಾಜಿಕ ಅರಣ್ಯ) ಸಂಜೀವ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಹಾಗಾಗಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಕಂದೇಲ್ವಾಲ್ ತಿಳಿಸಿದ್ದಾರೆ.