ಜೈಪುರ(ರಾಜಸ್ಥಾನ): ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಟೈಲರ್ ಕನ್ಹಯ್ಯಾ ಲಾಲ್ ಶಿರಚ್ಛೇದ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನ ಇಂದು ಜೈಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆತರುತ್ತಿದ್ದ ಅಲ್ಲಿ ಸೇರಿದ್ದ ಆಕ್ರೋಶಿತ ಜನರ ಗುಂಪೊಂದು ಹಲ್ಲೆ ನಡೆಸಿದೆ. ಈ ವೇಳೆ ಆರೋಪಿಗಳ ಬಟ್ಟೆಯನ್ನು ಹರಿದು ಹಾಕಿದ್ದಾರೆ. ಜೈಪುರ ನ್ಯಾಯಾಲಯದ ಹೊರಗಡೆ ಈ ಘಟನೆ ನಡೆದಿದೆ.
ಆರೋಪಿಗಳನ್ನ ಪೊಲೀಸರು ವ್ಯಾನ್ನೊಳಗೆ ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಅಲ್ಲಿ ಸೇರಿದ್ದ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಯಾವುದೇ ರೀತಿಯ ಹೆಚ್ಚಿನ ತೊಂದರೆಯಾಗಿಲ್ಲ. ಆರೋಪಿಗಳನ್ನ ಜುಲೈ 12ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಗೆ ನೀಡಲಾಗಿದೆ. ಕೊಲೆ ಆರೋಪಿಗಳಾದ ರಿಯಾಜ್ ಅಖ್ತಾರಿ, ಮೊಹಮ್ಮದ್, ಮೌಸಿನ್ ಮತ್ತು ಆಸೀಫ್ ಎಂಬುವವರನ್ನ ಎನ್ಐಎ ನ್ಯಾಯಾಲಯ 10 ದಿನಗಳ ಪೊಲೀಸ್ ವಶಕ್ಕೆ ನೀಡಿ, ಆದೇಶ ಹೊರಡಿಸಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಟ್ವೀಟ್ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕಾಗಿ ಕನ್ಹಯ್ಯಾ ಲಾಲ್ ಅವರನ್ನು ಹಂತಕರು ಶಿರಚ್ಛೇದ ಮಾಡಿದ್ದರು.
ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವ ಕಾರಣ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಸೇರಿದ್ದ ಅಪಾರ ಜನರು ಪಾಕಿಸ್ತಾನ್ ಮುರ್ದಾಬಾದ್, ಕನ್ಹಯ್ಯಾ ಹಂತಕರಿಗೆ ಮರಣದಂಡನೆ ವಿಧಿಸಿ ಎಂಬ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಟೈಲರ್ ಶಿರಚ್ಛೇದ ಪ್ರಕರಣ.. ಉದ್ಯಮಿ ಕೊಲೆಗೂ ಈ ಕಿರಾತಕರು ಇಟ್ಟಿದ್ದರಂತೆ ಮುಹೂರ್ತ!
ಕಳೆದ ಮಂಗಳವಾರ ಟೈಲರ್ ಕನ್ಹಯ್ಯಾ ಲಾಲ್ ಎಂಬುವರನ್ನು ರಿಯಾಜ್ ಅಖ್ತಾರಿ ಮತ್ತು ಮೊಹಮ್ಮದ್ ಎಂಬುವರು ಕತ್ತು ಸೀಳಿ ಕೊಲೆ ಮಾಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಮಾಡಿದ್ದರು. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಕೃತ್ಯ ನಡೆದ ಎರಡು ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಇದರ ಬೆನ್ನಲ್ಲೇ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.