ನವದೆಹಲಿ : ಹೊಸ ಐಟಿ ನಿಯಮಗಳನ್ನು ಪಾಲಿಸುವ ಬಗ್ಗೆ ಭಾರತ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯದ ಮಧ್ಯೆ ಟ್ವಿಟರ್ ವೆಬ್‌ಸೈಟ್ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖನ್ನು ಪ್ರತ್ಯೇಕ ದೇಶವೆಂದು ತೋರಿಸುತ್ತಿದೆ.
ಟ್ವಿಟರ್ ಭಾರತದ ನಕ್ಷೆಯನ್ನು ತಪ್ಪಾಗಿ ನಿರೂಪಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಲೇಹ್ ಅನ್ನು ಚೀನಾದ ಭಾಗವಾಗಿ ತೋರಿಸಿತ್ತು. ಯುಎಸ್ ಡಿಜಿಟಲ್ ದೈತ್ಯ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ಗುದ್ದಾಡುತ್ತಿದೆ. ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಸರ್ಕಾರ ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿದೆ.
ಟ್ವಿಟರ್ನಿಂದ ನೇಮಕಗೊಂಡಿದ್ದ ಕುಂದುಕೊರತೆ ಆಲಿಸುವ ಅಧಿಕಾರಿ ಜೂನ್ 27ರಂದು ಅಧಿಕಾರದಿಂದ ಕೆಳಗಿಳಿದಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಕಾನೂನು ಪಾಲನೆಯ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಮಧ್ಯಂತರವಾಗಿ ಧರ್ಮೇಂದ್ರ ಚತುರ್ ಎಂಬ ವ್ಯಕ್ತಿಯನ್ನು ಭಾರತದ ಗ್ರೀವಿಯೆನ್ಸ್ ಅಧಿಕಾರಿ (ಗ್ರಾಹಕರ ದೂರಿಗೆ ಸ್ಪಂದಿಸುವ ಅಧಿಕಾರಿ)ಯನ್ನಾಗಿ ನೇಮಕ ಮಾಡಿತ್ತು.
ದೇಶದ ಹೊಸ ಕಾನೂನು ಪಾಲನೆಗೆ ಉದ್ದೇಶಪೂರ್ವಕವಾಗಿ ಟ್ವಿಟರ್ ನಿರಾಕರಿಸುತ್ತಿದೆ ಹಾಗೂ ನಿರ್ಲಕ್ಷ್ಯಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. 50 ಲಕ್ಷ ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಕುಂದು-ಕೊರತೆಗಳನ್ನು ಆಲಿಸುವ ಅಧಿಕಾರಿಯನ್ನು ನೇಮಕ ಮಾಡಿ ಅವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂಬ ನಿಯಮವಿದೆ.
ಅಷ್ಟೇ ಅಲ್ಲದೇ ಮುಖ್ಯ ಅನುಸರಣೆ ಅಧಿಕಾರ, ನೋಡಲ್ ಸಂಪರ್ಕ ಅಧಿಕಾರಿ ಹಾಗೂ ಸ್ಥಳೀಯವಾಗಿ ಕುಂದು ಕೊರತೆಗಳನ್ನು ಆಲಿಸುವ ಅಧಿಕಾರಿಯ ನೇಮಕವಾಗಬೇಕಿದೆ. ಸರ್ಕಾರದ ಮಾಹಿತಿಯ ಪ್ರಕಾರ ಟ್ವಿಟರ್ನ ನಿರ್ಲಕ್ಷ್ಯಕ್ಕೆ ಈಗ ಅದು ಕಾನೂನಿನ ರಕ್ಷಣೆಯನ್ನು ಕಳೆದುಕೊಂಡಿದೆ. ಅದರ ಚಂದಾದಾರರು ಪೋಸ್ಟ್ ಮಾಡುವ ಅಂಶಗಳಿಗೆ ಕಾನೂನಾತ್ಮಕವಾಗಿ ಸಂಸ್ಥೆಯೇ ಹೊಣೆಯಾಗಿರಲಿದೆ.