ನವದೆಹಲಿ : ಚೀನಾದಲ್ಲಿ ಲಡಾಖ್ ಭಾಗವಿದೆ ಎಂದು ತಪ್ಪಾಗಿ ತೋರಿಸಿದ್ದಕ್ಕೆ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಪ್ರಮುಖ ಸಂಸದೀಯ ಸಮಿತಿಗೆ ಲಿಖಿತವಾಗಿ ಕ್ಷಮೆಯಾಚಿಸಿದೆ. ತಿಂಗಳ ಅಂತ್ಯದ ವೇಳೆಗೆ ಈ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಭಾರತದ ನಕ್ಷೆಯನ್ನು ತಪ್ಪಾಗಿ ಭೌಗೋಳಿಕ ನಮೋದನೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ ಟ್ವಿಟರ್ ಇಂಕ್‌ನ ಮುಖ್ಯ ಅಧಿಕಾರಿ ಡೇಮಿಯನ್ ಕರಿಯನ್ ಅವರು ಸಹಿ ಮಾಡಿ ಅಫಿಡವಿಟ್ ಸಲ್ಲಿಸಿದ್ದಾರೆ.
ಲಡಾಖ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟರ್ ಇಂಡಿಯಾ ಸಂಸ್ಥೆ ಬಳಿ ಕೇಂದ್ರ ಸರ್ಕಾರದ ಸಂಸದ ಸಮಿತಿ ವಿವರಣೆ ಕೇಳಿತ್ತು. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಸಮಿತಿ ಟ್ವಿಟರ್ ಇಂಡಿಯಾದ ಪ್ರತಿನಿಧಿಗಳನ್ನು ಕರೆಸಿ ಲಡಾಖ್ ವಿವಾದದ ಬಗ್ಗೆ ವಿಚಾರಣೆ ನಡೆಸಿತ್ತು.
ಸಮಿತಿಯ ಮುಂದೆ ಹಾಜರಾದ ಟ್ವಿಟರ್ ಇಂಡಿಯಾದ ಪ್ರತಿನಿಧಿಗಳು ಕ್ಷಮೆಯಾಚಿಸಿದರು. ಆದರೆ, ಇದು ದೇಶದ ಸಾರ್ವಭೌಮತ್ವ ಪ್ರಶ್ನಿಸುವ ಕ್ರಿಮಿನಲ್ ಅಪರಾಧ. ಅಫಿಡವಿಟ್ ಅನ್ನು ಟ್ವಿಟರ್ ಇಂಕ್ ಸಲ್ಲಿಸಬೇಕು ಎಂದು ಸೂಚಿಸಲಾಯಿತು.
ಲಡಾಖ್ ಚೀನಾದ ಭಾಗದಲ್ಲಿ ಇದೆ ಎಂದು ತೋರಿಸಲ್ಪಟ್ಟ ಅಫಿಡವಿಟ್ನಲ್ಲಿ ಟ್ವಿಟರ್ ಈಗ ನಮಗೆ ಲಿಖಿತ ಕ್ಷಮೆಯಾಚಿಸಿದೆ ಎಂದು ಲೇಖಿ ಹೇಳಿದ್ದಾರೆ.