ನವದೆಹಲಿ : ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟರ್ ಕೆಲಸ ಮಾಡುತ್ತಿಲ್ಲವೆಂದು ಬುಧವಾರ ಮಧ್ಯಾಹ್ನ ಅನೇಕ ಬಳಕೆದಾರರು ದೂರಿದ್ದಾರೆ. ಟ್ವಿಟರ್ ಫೀಡ್ ರಿಫ್ರೆಶ್ ಆಗುತ್ತಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಔಟ್ಟೇಜ್ ಮಾನಿಟರಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ ಭಾರತದಲ್ಲಿ ಇಂದು ಸಂಜೆ 4:09 ರ ಸುಮಾರಿಗೆ ಟ್ವಿಟರ್ ಸ್ಥಗಿತಗಳ ಸಂಖ್ಯೆ 752 ಕ್ಕೆ ತಲುಪಿದೆ. ಅಧಿಕೃತ ಅಪ್ಲಿಕೇಶನ್ ಮೂಲಕ ಟ್ವಿಟರ್ ಸೈಟ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಬಳಕೆದಾರರು ಹೇಳಿದ್ದಾರೆ.
ತಮ್ಮ ಫೀಡ್‌ಗಳನ್ನು ನೋಡಲು ಪ್ರಯತ್ನಿಸಿದ ಕೆಲವು ಬಳಕೆದಾರರಿಗೆ "ಟ್ವಿಟ್ಟರ್‌ಗೆ ಸುಸ್ವಾಗತ! ನಿಮ್ಮ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಇದು ಅತ್ಯುತ್ತಮ ಸ್ಥಳವಾಗಿದೆ. ಇದೀಗ ಅನುಸರಿಸಲು ಕೆಲವು ಜನರು ಮತ್ತು ವಿಷಯಗಳನ್ನು ಹುಡುಕಿ" (Welcome to Twitter! This is the best place to see what's happening in your world. Find some people and topics to follow now) ಎಂದು ಪಾಪ್-ಅಪ್ ಸಂದೇಶ ಸ್ಕ್ರೀನ್ ಮೇಲೆ ಮೂಡಿ ಬರುತ್ತಿದೆ. ಶೇಕಡಾ 58 ರಷ್ಟು ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ಹೊಂದಿದ್ದರೆ, ಶೇಕಡಾ 37 ರಷ್ಟು ಜನರು ಡೆಸ್ಕ್‌ಟಾಪ್ ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಉಳಿದ 5 ಶೇಕಡಾ ಬಳಕೆದಾರರು ಸರ್ವರ್ ಸಂಪರ್ಕದ ಬಗ್ಗೆ ದೂರು ನೀಡಿದ್ದಾರೆ ಎಂದು ಡೌನ್‌ಟೆಕ್ಟರ್ ಹೇಳಿದೆ.
ಮತ್ತೊಂದೆಡೆ, ಜಿಯೋ ನೆಟ್‌ವರ್ಕ್‌ಗಳಲ್ಲಿ ಮಾತ್ರ ನೆಟ್‌ವರ್ಕ್ ಡೌನ್ ಆಗಿದೆ ಎಂದು ಕೆಲ ಬಳಕೆದಾರರು ಹೇಳಿರುವುದು ಗಮನಾರ್ಹ. ಜಿಯೋ ಬಳಕೆದಾರರಿಗೆ ಟ್ವಿಟರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ. ಟ್ವಿಟರ್ ಡೌನ್ ಆಗಿದ್ದಕ್ಕೆ ಕೋಪಗೊಂಡ ಕೆಲವರು ತಮ್ಮ ಕೋಪವನ್ನು ಹೊರ ಹಾಕಿದ್ದಾರೆ. ಟ್ವಿಟರ್ ಹಾಳಾಗುತ್ತಿದೆ, ವೀಡಿಯೊಗಳು ಸರಿಯಾಗಿ ಕೆಲಸ ಮಾಡದ್ದರಿಂದ ಬೇಜಾರಾಗಿದೆ ಎಂದು ಕೆಲವರು ಬರೆದಿದ್ದಾರೆ. 2 ವಾರಗಳಲ್ಲಿ 4ನೇ ಅಥವಾ 5ನೇ ಬಾರಿ ಟ್ವಿಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದೇನು? ಎಂದು ಓರ್ವ ಬಳಕೆದಾರರು ಬರೆದಿದ್ದಾರೆ.
ಮತ್ತೆ ನೌಕರರನ್ನು ವಜಾಗೊಳಿಸಿದ ಮಸ್ಕ್: ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಟ್ವಿಟರ್ ಕನಿಷ್ಠ 200 ಉದ್ಯೋಗಿಗಳನ್ನು ಅಥವಾ ಅದರ ಶೇಕಡಾ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ, ಕಳೆದ ಅಕ್ಟೋಬರ್‌ನಲ್ಲಿ ಎಲೋನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡ ನಂತರ ಉದ್ಯೋಗ ಕಡಿತಗಳು ಮುಂದುವರಿದಿವೆ.
ಮಸ್ಕ್ ಪ್ರಕಾರ ಕಂಪನಿಯು ಕಳೆದ ತಿಂಗಳು ಸುಮಾರು 2,300 ಸಕ್ರಿಯ ಉದ್ಯೋಗಿಗಳನ್ನು ಹೊಂದಿದೆ. ಇತ್ತೀಚಿನ ಉದ್ಯೋಗ ಕಡಿತಗಳು ನವೆಂಬರ್ ಆರಂಭದಲ್ಲಿ ಶುರುವಾದ ಸಾಮೂಹಿಕ ಉದ್ಯೋಗ ಕಡಿತದ ಭಾಗವಾಗಿವೆ. ಟ್ವಿಟರ್ ಸುಮಾರು 3,700 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಟೆಂಟ್ ಮಾಡರೇಶನ್ ಬಗೆಗಿನ ವಿವಾದದ ಹಿನ್ನೆಲೆಯಲ್ಲಿ ಜಾಹೀರಾತುದಾರರು ಜಾಹೀರಾತು ನೀಡುವುದನ್ನು ನಿಲ್ಲಿಸಿದ್ದರಿಂದ ಆದಾಯದಲ್ಲಿ ಭಾರಿ ಕುಸಿತ ಉಂಟಾಗಿದೆ ಎಂದು ನವೆಂಬರ್‌ನಲ್ಲಿ ಮಸ್ಕ್ ಹೇಳಿದ್ದರು. ಟ್ವಿಟರ್ ಇತ್ತೀಚೆಗೆ ತನ್ನ ಕೆಲವು ಕಂಟೆಂಟ್ ಕ್ರಿಯೇಟರ್ಸ್ಗಳೊಂದಿಗೆ ಜಾಹೀರಾತು ಆದಾಯವನ್ನು ಹಂಚಿಕೊಳ್ಳಲು ಪ್ರಾರಂಭಿಸಿದೆ.