ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ದಸರಾ ಹಬ್ಬದ ದಿನದಂದು (ಅ.5) ತೆಲಂಗಾಣ ಭವನದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಮುಖಂಡರು ಸಭೆಯಲ್ಲಿ ಹಾಜರಿರಲಿದ್ದು, ರಾಷ್ಟ್ರೀಯ ಪಕ್ಷದ ಘೋಷಣೆಯ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದು ತಿಳಿದು ಬಂದಿದೆ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಉತ್ಸುಕರಾಗಿರುವ ಕೆಸಿಆರ್ ಈ ಬಗ್ಗೆ ಆಗಾಗ ಮಾತನಾಡಿದ್ದಾರೆ. ಅವರು ಈಗ ಹೊಸ ಪಕ್ಷ ಸ್ಥಾಪನೆಗೆ ಇನ್ನು ತಡಮಾಡದೆ ಕಾರ್ಯೋನ್ಮುಖರಾಗಲಿದ್ದಾರೆ.
ಹೊಸ ಪಕ್ಷದ ಹೆಸರೇನು: ಸಂಸದರು, ಶಾಸಕರು, ಎಂಎಲ್‌ಸಿಗಳು ಮತ್ತು ಟಿಆರ್‌ಎಸ್ ರಾಜ್ಯ ನಾಯಕರ ಒಮ್ಮತದ ಮೇರೆಗೆ, ದಸರಾ ಹಬ್ಬದ ದಿನದ ಮಧ್ಯಾಹ್ನ ಕೆಸಿಆರ್ ಅವರ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಲಾಗುತ್ತದೆ. ಈಗಿರುವ ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ ಎಂದು ವರದಿಯಾಗಿದೆ. ಭಾರತ್ ರಾಷ್ಟ್ರ ಸಮಿತಿ ಮತ್ತಿತರ ಹೆಸರುಗಳು ಈಗಾಗಲೇ ಪರಿಗಣನೆಯಲ್ಲಿದ್ದು, ಹೊಸ ‘ಮೇರಾ ಭಾರತ್ ಮಹಾನ್’ ಮತ್ತಿತರ ಹೆಸರುಗಳೂ ಮುನ್ನೆಲೆಗೆ ಬಂದಂತಿದೆ.
ಧ್ವಜದಲ್ಲಿ ಭಾರತದ ಚಿತ್ರ ಗುಲಾಬಿ ಬಣ್ಣ: ದಸರಾ ದಿನದಂದು ರಾಷ್ಟ್ರೀಯ ಪಕ್ಷದ ನಿರ್ಣಯದ ನಂತರ ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಅನುಮೋದನೆಗೆ ಕಳುಹಿಸಲಾಗುವುದು ಎಂದು ವರದಿಯಾಗಿದೆ. ಸದ್ಯ ಪಕ್ಷದ ಚಿಹ್ನೆಯಾಗಿರುವ ಕಾರನ್ನು ಮುಂದುವರಿಸುವಂತೆ ಮನವಿ ಮಾಡಲಿದ್ದಾರೆ. ರಾಷ್ಟ್ರೀಯ ಪಕ್ಷದ ಧ್ವಜ ಕೂಡ ಅಂತಿಮಗೊಂಡಂತಿದೆ. ಆ ಧ್ವಜದಲ್ಲಿ ಭಾರತದ ಚಿತ್ರದೊಂದಿಗೆ ಗುಲಾಬಿ ಬಣ್ಣವನ್ನು ಕೂಡ ಅಳವಡಿಸಲಾಗುವುದು ಎಂದು ವರದಿಯಾಗಿದೆ.
ಸಾರ್ವಜನಿಕ ಸಭೆಗೆ ಯೋಜನೆ: ರಾಷ್ಟ್ರೀಯ ಪಕ್ಷಕ್ಕೆ ಒಪ್ಪಿಗೆ ದೊರೆತ ನಂತರ ಕೆಸಿಆರ್ ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಅಜೆಂಡಾ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ಪಕ್ಷದ ಸಿದ್ಧತೆ ಬಗ್ಗೆ ಸಂಪೂರ್ಣ ಸ್ಪಷ್ಟನೆ ಸಿಗಲಿದೆಯಂತೆ.
ಇದನ್ನೂ ಓದಿ: ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾದರೆ ತಪ್ಪೇನು? ಸಿಎಂ ಕೆಸಿಆರ್