ನವದೆಹಲಿ: ಭಾರತ ಮತ್ತು ಚೀನಾ ನಡುವಿನ 9ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಕಳೆದ ವಾರ ಉತ್ತರ ಸಿಕ್ಕಿಂನ ನಾಕು ಲಾ ಗಡಿಭಾಗದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತದ ಭೂ ಭಾಗ ಅತಿಕ್ರಮಿಸಲು ಯತ್ನಿಸಿದ ಚೀನಾ ಸೈನಿಕರಿಗೆ ಭಾರತೀಯ ಸೇನೆ ಭಾರಿ ಏಟು ನೀಡಿದ್ದು, ಚೀನಾ ಆಕ್ರಮಣವನ್ನ ವಿಫಲಗೊಳಿಸಿದೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಭಾರತದ ಸೈನಿಕರ ಪ್ರತಿರೋಧದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ. ಈ ವೇಳೆ, ಎರಡು ಸೇನೆಗಳ ಮಧ್ಯೆ ಘರ್ಷಣೆ ಉಂಟಾಗಿದೆ. 20 ಡ್ರ್ಯಾಗನ್ ಯೋಧರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ನಾಲ್ವರು ಭಾರತೀಯ ಯೋಧರು ಸಣ್ಣಪುಟ್ಟ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಪ್ರತಿಕೂಲ ಹವಾಮಾನದ ಮಧ್ಯೆಯೂ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಸಫಲವಾಗಿದೆ.
ಉಭಯ ಸೇನೆಗಳ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಹಾಗೂ ಚೀನಾ ಸೇನೆ, 2021ರ ಜನವರಿ 20 ರಂದು ಉತ್ತರ ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಪೀಪಲ್ಸ್ ಲಿಬರೇಷನ್ ಪಡೆ (ಪಿಎಲ್ಎ) ನಡುವೆ ಸಣ್ಣ ಮಟ್ಟದಲ್ಲಿ ಘರ್ಷಣೆ ನಡೆದಿದೆ ಎಂದು ಸ್ಪಷ್ಟಪಡಿಸಿವೆ.
ಅಲ್ಲದೇ ಅಂದು ಉಂಟಾದ ಸಮಸ್ಯೆಯನ್ನು ಸ್ಥಳೀಯ ಕಮಾಂಡರ್ಗಳೇ ಬಗೆಹರಿಸಿದ್ದಾರೆ. ತಪ್ಪಾಗಿರುವ ವರದಿಗಳನ್ನು ಅತಿಯಾಗಿ ಪ್ರಸಾರ ಮಾಡುವುದರಿಂದ ಅಥವಾ ಅದನ್ನು ಉತ್ಪ್ರೇಕ್ಷಿಸುವುದರಿಂದ ದೂರವಿರಲು ಮಾಧ್ಯಮಗಳಲ್ಲಿ ಮನವಿ ಮಾಡುತ್ತೇವೆ ಎಂದು ಚೀನಾ ಸೇನೆ ತಿಳಿಸಿದೆ.
2019ರ ಆಗಸ್ಟ್ನಲ್ಲಿ ಪೂರ್ವ ಲಡಾಖ್ನಲ್ಲಿ ನಡೆದ ಸಂಘರ್ಷದ ಬಳಿಕ ಭಾರತ - ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಚರ್ಚಿಸಲು, ಗಡಿಯಲ್ಲಿ ಶಾಂತಿ ಕಾಪಾಡಲು ಉಭಯ ರಾಷ್ಟ್ರಗಳ ನಡುವೆ ಸಭೆ, ಮಾತುಕತೆಗಳು ನಡೆಯುತ್ತಿದ್ದರೂ ಚೀನಾ ಕುತಂತ್ರ ಮುಂದುವರೆಸುತ್ತಲೇ ಇದೆ. ನಿನ್ನೆಯಷ್ಟೇ 15 ಗಂಟೆಗಳಿಗಿಂತ ಹೆಚ್ಚು ಕಾಲ ಭಾರತ ಮತ್ತು ಚೀನಾ ನಡುವೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಹತ್ತರ ಸಭೆ ನಡೆದಿತ್ತು.