ಪಾಟ್ನಾ: ಒಂದೆಡೆ ರಾಜ್ಯದಲ್ಲಿ ಪಿಎಂಸಿಎಚ್ ಆಸ್ಪತ್ರೆಯನ್ನು ವಿಶ್ವದರ್ಜೆಗೆ ಏರಿಸುವ ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದೆಡೆ ಇಲ್ಲಿ ರೋಗಿಗಳಿಗೆ ಕನಿಷ್ಠ ಮೂಲ ಸೌಲಭ್ಯಗಳೂ ಸಹ ಇಲ್ಲದಂತಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ತಾಯಿಯೊಬ್ಬಳು ತನ್ನ ಮಗುವಿನ ಪ್ರಾಣ ಉಳಿಸಲು ಪಡಬಾರದ ಕಷ್ಟ ಪಟ್ಟಿದ್ದಾಳೆ.
ಮಹಿಳೆಯೊಬ್ಬಳು ತನ್ನ ಮಗುವನ್ನು ಮಡಿಲಲ್ಲಿಟ್ಟುಕೊಂಡೇ ಆಮ್ಲಜನಕ ಪೈಪ್ನೊಂದಿಗೆ ಎಕ್ಸ್‌ರೆಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಮನಕಲಕುವಂತಿದೆ. ಶಿಶು ವಾರ್ಡ್‌ನಲ್ಲಿರುವ ಮಗುವನ್ನು ಎಕ್ಸ್‌ರೆ ಕೋಣೆಗೆ ಕರೆದೊಯ್ಯಬೇಕಿತ್ತು. ಆದರೆ ಮಗುವನ್ನು ಅಲ್ಲಿಗೆ ಕರೆದೊಯ್ಯಲು ಆಸ್ಪತ್ರೆಯಿಂದ ಟ್ರಾಲಿಗಳು ಲಭ್ಯವಿರಲಿಲ್ಲ.
ಗಂಟಗಟ್ಟಲೆ ಕಾದರೂ ಕೂಡ ಟ್ರಾಲಿ ಸಿಗದ ಕಾರಣ ಸಿಬ್ಬಂದಿ ಸಹಾಯ ಪಡೆದ ತಾಯಿ ತನ್ನ ಮಗುವನ್ನು ಮಡಿಲಲ್ಲಿಟ್ಟುಕೊಂಡೇ ಆಮ್ಲಜನಕ ಪೈಪ್ನೊಂದಿಗೆ ತೆಗೆದುಕೊಂಡು ಹೋದರು.
ಮುಜಾಫರ್ಪುರ್ ನಿವಾಸಿ ಸೀಮಾ ದೇವಿ ಈ ಬಗ್ಗೆ ಮಾತನಾಡಿ, 'ಮಗು ಎದೆ ನೋವಿನಿಂದ ಬಳಲುತ್ತಿದೆ. ಚಿಕಿತ್ಸೆಗಾಗಿ ಪಿಎಂಸಿಎಚ್ ಬಂದಿದ್ದೆ. ನನ್ನ ಮಗುವನ್ನು ಶಿಶು ವಾರ್ಡ್‌ಗೆ ದಾಖಲಿಸಲಾಗಿದೆ. ವೈದ್ಯರು ಎದೆಯ ಎಕ್ಸ್‌ರೆ ಕೇಳಿದರು. ಆದರೆ ಮಗುವನ್ನು ಎಕ್ಸ್‌ರೆ ರೂಂವರೆಗೆ ಸಾಗಿಸಲು ಟ್ರಾಲಿ ಸಿಗಲಿಲ್ಲ. ಬಹಳ ಸಮಯ ಕಾಯ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮಗುವನ್ನು ಆಮ್ಲಜನಕ ಪೈಪ್ನೊಂದಿಗೆ ಮಡಿಲಲ್ಲಿ ಎತ್ತುಕೊಂಡು ಕೊಠಡಿಗೆ ಕರೆದೊಯ್ಯಬೇಕಾಯ್ತು ಎಂದರು.