ಅಸ್ಸೋಂ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಒಂದು ತಿಂಗಳಿನಿಂದ ಹಲವೆಡೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದು, ಹೆಚ್ಚಿನವರು ಆಹಾರ - ನೀರಿಗೂ ಪರದಾಟ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದು, ಇದೀಗ ತ್ರಿಪುರಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಮ್ಮ ವಿಶಿಷ್ಟ ಆವಿಷ್ಕಾರದ ಮೂಲಕ ಶುದ್ಧೀಕರಿಸಿದ ನೀರನ್ನು ಒದಗಿಸುತ್ತಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ತ್ರಿಪುರಾ ವಿಶ್ವವಿದ್ಯಾನಿಲಯದ ರಾಸಾಯನಿಕ ಮತ್ತು ಪಾಲಿಮರ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರ್ಜಿತ್ ನಾಥ್, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ನಿನ್ನೆ ಅಸ್ಸೋಂನ ಸಿಲ್ಚಾರ್‌ಗೆ ತೆರಳಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ.
ತ್ರಿಪುರಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳು, ವಿದ್ಯಾರ್ಥಿಗಳು ಸಹ ನಮ್ಮೊಂದಿಗೆ ಒಗ್ಗೂಡಿದ್ದಾರೆ. ಸಾಧ್ಯ ಇರುವ ಎಲ್ಲವನ್ನೂ ಮಾಡಲಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ಹಣ, ಬಟ್ಟೆ, ಆಹಾರ ಇತ್ಯಾದಿಗಳನ್ನು ಅಸ್ಸೋಂನ ಸಿಲ್ಚಾರ್‌ನಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್
ವಿಶೇಷವಾಗಿ ಪ್ರೊಫೆಸರ್ ಹರ್ಜಿತ್ ನಾಥ್ ಅವರು ಪರಿಹಾರ ಸಾಮಗ್ರಿಗಳ ವಿತರಣೆ ವೇಳೆ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸಿಲ್ಲ. ಬದಲಾಗಿ 'ಪೋರ್ಟಬಲ್ ಸೂಟ್‌ಕೇಸ್ ವಾಟರ್ ಪ್ಯೂರಿಫೈಯರ್' ಬಳಸಿ ನೀರು ವಿತರಿಸಿದ್ದೇವೆ. ಇದು ಶುದ್ಧ ನೀರನ್ನು ಪೂರೈಸುತ್ತದೆ. ಸಾಧನವು ವಿದ್ಯುತ್ ಮತ್ತು ಸೌರಶಕ್ತಿ ಎರಡರಲ್ಲೂ ಕೆಲಸ ಮಾಡುತ್ತದೆ.
ಎರಡೂ ಲಭ್ಯವಿಲ್ಲದಿದ್ದರೆ ಬ್ಯಾಟರಿಗಳನ್ನು ಬಳಸಿಕೊಂಡು ನೀರನ್ನು ಶುದ್ಧೀಕರಿಸಬಹುದು. ನೀರನ್ನು ಶುದ್ಧೀಕರಿಸುವುದಲ್ಲದೇ 5W ಎಲ್ಇಡಿ ಬಲ್ಬ್ ಅನ್ನು ಹೊತ್ತಿಸುತ್ತದೆ. ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಸಹ ಚಾರ್ಜ್ ಮಾಡಿಕೊಳ್ಳಬಹುದೆಂದು ಮಾಹಿತಿ ನೀಡಿದರು. ಇನ್ನೂ ನಿನ್ನೆ ಸುಮಾರು 200 ಲೀಟರ್ ಶುದ್ಧೀಕರಿಸಿದ ಕುಡಿವ ನೀರನ್ನು ಸಂತ್ರಸ್ತರಿಗೆ ವಿತರಿಸಿದ್ದೇವೆ ಎಂದು ಅವರು ಹೇಳಿದರು.