ಅಗರ್ತಲಾ (ತ್ರಿಪುರಾ): ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಶನಿವಾರ ಭಾರಿ ರೈಲು ಅವಘಡವೊಂದು ತಪ್ಪಿದೆ. ರೈಲ್ವೆ ಹಳಿ ಮೇಲೆ ನಿಂತಿದ್ದ ಕಲ್ಲು ತುಂಬಿದ್ದ ಟ್ರಾಲಿಗೆ ಅಗರ್ತಲಾ-ಸಬ್ರೂಮ್ ಲೋಕಲ್ ರೈಲು ಡಿಕ್ಕಿ ಹೊಡೆದು ಇಂಜಿನ್‌ನ ಚಕ್ರಗಳು ಹಳಿತಪ್ಪಿವೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಪರಿಣಾಮ ರೈಲಿನಿಂದ ಸುಮಾರು ಒಂದು ಸಾವಿರ ಪ್ರಯಾಣಿಕರು ಪಾರಾಗಿದ್ದಾರೆ.
ಸೆಪಹಿಜಾಲಾ ಜಿಲ್ಲೆಯ ಬಿಶಾಲ್ಘರ್ ರೈಲು ನಿಲ್ದಾಣದ ಸಮೀಪ ಸಿಂಗಲ್ ಲೈನ್ ಟ್ರ್ಯಾಕ್‌ನ ಮೇಲೆ ತಪ್ಪಾಗಿ ಕಲ್ಲು ತುಂಬಿದ್ದ ಟ್ರಾಲಿ ಬಿಟ್ಟು ಹೋಗಲಾಗಿತ್ತು. ಇದೇ ವೇಳೆ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಬ್ರೂಮ್ - ದಕ್ಷಿಣ ತ್ರಿಪುರಾ ಲೋಕಲ್ ರೈಲಿನ ಚಾಲಕ ಹಳಿ ಮೇಲೆ ಕಲ್ಲು ತುಂಬಿದ್ದ ಟ್ರಾಲಿಯನ್ನು ಗಮನಿಸಿದ್ದಾನೆ. ತಕ್ಷಣಕ್ಕೆ ರೈಲು ನಿಲ್ಲಿಸಿದ್ದಾರೆ. ಆದರೂ, ಟ್ರಾಲಿಯು ರೈಲಿನ ಚಕ್ರಕ್ಕೆ ಸಿಲುಕಿದೆ. ಇದರಿಂದಾಗಿ ರೈಲಿನ ಇಂಜಿನ್ ಮುಂಭಾಗದ ಚಕ್ರವು ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Madurai Train Fire Accident: ಮಧುರೈ ರೈಲಿನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ...
ಅಗರ್ತಲಾದಿಂದ ಸುಮಾರು 27 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಷಯ ತಿಳಿದು ರೈಲ್ವೆ ಅಧಿಕಾರಿಗಳು, ಸರ್ಕಾರಿ ರೈಲ್ವೆ ಪೊಲೀಸ್ (Government Railway Police - GRP) ಮತ್ತು ರೈಲ್ವೆ ರಕ್ಷಣಾ ಪಡೆ (Railway Protection Force -RPF) ಸಿಬ್ಬಂದಿ ಅಗರ್ತಲಾದಿಂದ ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ಸುಮಾರು ಒಂದು ಸಾವಿರ ಪ್ರಯಾಣಿಕರು ರೈಲಿನಲ್ಲಿದ್ದರು. ಯಾರಿಗೂ ಯಾವುದೇ ಅಪಾಯವಾಗಿಲ್ಲ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಜಲ್ ಪೌಲ್ ಮಾಹಿತಿ ಪ್ರಕಾರ, ಅಗರ್ತಲಾ ರೈಲು ನಿಲ್ದಾಣದಿಂದ ರೈಲು ದಕ್ಷಿಣ ತ್ರಿಪುರಾ ಜಿಲ್ಲೆಯ ಬಾಂಗ್ಲಾದೇಶದ ಗಡಿಯಲ್ಲಿರುವ ಉಪವಿಭಾಗದ ಪಟ್ಟಣ ಸಬ್ರೂಮ್‌ಗೆ ಹೊರಟಿತ್ತು. ಮಾರ್ಗ ಮಧ್ಯೆ ರೈಲ್ವೆ ಹಳಿಯಲ್ಲಿ ಟ್ರಾಲಿಗೆ ಡಿಕ್ಕಿ ಹೊಡೆದು ರೈಲು ಹಠಾತ್ತನೆ ನಿಂತಿತ್ತು. ಇದರಿಂದ ಗಾಬರಿಗೊಂಡು ಪ್ರಯಾಣಿಕರು ನೂಕುನುಗ್ಗಲು ಉಂಟು ಮಾಡಿದರು ಎಂದು ಹೇಳಿದ್ದಾರೆ. ಅಲ್ಲದೇ, ಸಮೀಪದ ರೈಲು ನಿಲ್ದಾಣ ಬಂದಾಗ ಪ್ರಯಾಣಿಕರು ರೈಲಿನಿಂದ ಇಳಿದರು ಎಂದು ವಿವರಿಸಿದ್ದಾರೆ.
ಮತ್ತೊಂದೆಡೆ, ಬಿಶಾಲ್ಘರ್ ರೈಲ್ವೆ ನಿಲ್ದಾಣದ ಕಾರ್ಮಿಕರು, ಮೇಲ್ವಿಚಾರಕರು ಮತ್ತು ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯವೇ ಈ ಘಟನೆ ಎಂದೂ ಆಕ್ರೋಶಗೊಂಡ ಪ್ರಯಾಣಿಕರು ಹೇಳಿದ್ದಾರೆ. ರೈಲು ಕಾರ್ಯಾಚರಣೆಯ ಸಮಯದಲ್ಲಿ ರೈಲು ಹಳಿಗಳ ಮೇಲೆ ಕಲ್ಲು ತುಂಬಿದ ಟ್ರಾಲಿಗಳನ್ನು ಬಿಡುವುದರ ಹಿಂದಿನ ಕಾರಣದ ಬಗ್ಗೆಯೂ ಪ್ರಯಾಣಿಕರು ಪ್ರಶ್ನೆಗಳನ್ನು ಎತ್ತಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Exclusive: ರೈಲು ಬೆಂಕಿ ದುರಂತ ಪ್ರಕರಣ: ಬೆಂಕಿಯ ಜ್ವಾಲೆ, ಪ್ರಯಾಣಿಕರ ಕಿರುಚಾಟ ಕೇಳಿಯೇ ನಿದ್ರೆಯಿಂದ ಎದ್ದ ಸ್ಥಳೀಯ ಜನರು