ಅಗರ್ತಲಾ: ಲರ್ಕಿರ್ ಧುಕಾನ್ ನಲ್ಲಿ ಶುಕ್ರವಾರ ಮಧ್ಯಾಹ್ನ ಅಮರ್‌ಪುರ ಉಪವಿಭಾಗದ ಬೀರ್‌ಗ್ಹ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು, 17 ಜನರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಇವರೆಲ್ಲರೂ ಬಿಜೆಪಿ ಬೆಂಬಲಿಗರಾಗಿದ್ದು, ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಭಾಗವಹಿಸಿದ ಬಿಜೆಪಿಯ ಮತದಾನ ರ್ಯಾಲಿಯಿಂದ ಹಿಂದಿರುಗುತ್ತಿದ್ದರು ಎನ್ನಲಾಗಿದೆ.
ಮ್ಯಾಕ್ಸ್ ಪಿಕಪ್ ವಾಹನದಲ್ಲಿ ಇವರೆಲ್ಲರೂ ಪ್ರಯಾಣಿಸುತ್ತಿದ್ದರು. ಓವರ್‌ಲೋಡ್ ಆಗಿದ್ದ ಕಾರಣ ವಾಹನವು ಲರ್ಕಿರ್ ಧುಕಾನ್ ಪ್ರದೇಶದ ಬಳಿಯ ಅಮರ್‌ಪುರದ ನೂತನ್ ಬಜಾರ್ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿದೆ.
ಘಟನೆಗೆ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಸಾವಿಗೀಡಾದವರ ಕುಟುಂಬದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ.